ಸಿಡಿಎಸ್ ಬಿಪಿನ್ ರಾವತ್ ಸಾವಿಗೀಡಾದ ಹೆಲಿಕಾಪ್ಟರ್ ಪತನಕ್ಕೆ ಪೈಲಟ್ ತಪ್ಪು ನಿರ್ಧಾರ ಕಾರಣ: ಸಮಿತಿ ವರದಿ

Update: 2024-12-19 18:01 GMT

ಹೊಸದಿಲ್ಲಿ : ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (CDS) ಜನರಲ್ ಬಿಪಿನ್ ರಾವತ್ ಮೃತಪಟ್ಟ ಹೆಲಿಕಾಪ್ಟರ್ ಪತನಕ್ಕೆ ‌ʼಮಾನವ ದೋಷʼ ಕಾರಣ ಎಂದು ಲೋಕಸಭೆಯಲ್ಲಿ ಮಂಡಿಸಲಾದ ರಕ್ಷಣಾ ಸ್ಥಾಯಿ ಸಮಿತಿಯ ವರದಿಯು ಹೇಳಿದೆ.

ಡಿಸೆಂಬರ್ 8, 2021 ರಂದು Mi-17 V5 ಹೆಲಿಕಾಪ್ಟರ್ ಅಪಘಾತದಲ್ಲಿ ಬಿಪಿನ್ ರಾವತ್ ಮೃತಪಟ್ಟಿದ್ದರು. ಈ ಅಪಘಾತದಲ್ಲಿ ಜನರಲ್ ರಾವತ್ ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ ಒಟ್ಟು 12 ಜನರು ಸಾವನ್ನಪ್ಪಿದ್ದಾರೆ. ತಮಿಳುನಾಡಿನ ಕೂನೂರು ಬಳಿಯ ಪರ್ವತ ಶ್ರೇಣಿಯಲ್ಲಿ ಹೆಲಿಕಾಪ್ಟರ್ ಪತನಗೊಂಡಿತ್ತು.

ಮೂರು ವರ್ಷಗಳ ನಂತರ, ನಿನ್ನೆ ಹಿಂದಿನ ದಿನ ಲೋಕಸಭೆಯಲ್ಲಿ ಮಂಡಿಸಲಾದ ರಕ್ಷಣಾ ಸ್ಥಾಯಿ ಸಮಿತಿಯ ವರದಿಯು ಡಿಸೆಂಬರ್ 8, 2021 ರಂದು ಸಂಭವಿಸಿದ Mi-17 ಅಪಘಾತವು "ಮಾನವ ದೋಷ (ಏರ್‌ಕ್ರೂ)" ಕಾರಣದಿಂದಾಗಿ ಸಂಭವಿಸಿದೆ ಎಂದು ಹೇಳಿದೆ.

2017 ರಿಂದ 2022 ರ ಹಣಕಾಸು ವರ್ಷಗಳಲ್ಲಿ ಹದಿಮೂರನೇ ರಕ್ಷಣಾ ಅವಧಿಯ ಯೋಜನೆಯಲ್ಲಿ ಒಟ್ಟು 34 ಐಎಎಫ್ ಅಪಘಾತಗಳು ಸಂಭವಿಸಿವೆ ಎಂದು 18 ನೇ ಲೋಕಸಭೆಯ ಸ್ಥಾಯಿ ಸಮಿತಿ ವರದಿ ಹೇಳಿದೆ. 2021-2022 ಅವಧಿಯಲ್ಲಿ, ಒಟ್ಟು ಒಂಭತ್ತು ಅಪಘಾತಗಳು ಸಂಭವಿಸಿವೆ.

ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ರಾವತ್ ಅವರ ಸಾವಿಗೆ ಕಾರಣವಾದ ಹೆಲಿಕಾಪ್ಟರ್ ಅಪಘಾತಕ್ಕೆ ಪೈಲಟ್ ದೋಷವು ಕಾರಣ ಎಂದು ರಕ್ಷಣಾ ಸ್ಥಾಯಿ ಸಮಿತಿಯ ವರದಿಯು ಖಚಿತಪಡಿಸಿದೆ.

ತನಿಖಾ ತಂಡವು ತನ್ನ ಪ್ರಾಥಮಿಕ ಸಂಶೋಧನೆಗಳಲ್ಲಿ, "ಕಣಿವೆಯಲ್ಲಿನ ಹವಾಮಾನ ಪರಿಸ್ಥಿತಿಗಳಲ್ಲಿನ ಅನಿರೀಕ್ಷಿತ ಬದಲಾವಣೆಯಿಂದಾಗಿ ಅಪಘಾತವು ಸಂಭವಿಸಿದೆ. ಒಮ್ಮೆಲೇ ಮೋಡಗಳ ಪ್ರವೇಶವು ಪೈಲಟ್‌ನ ದಿಗ್ಭ್ರಮೆಗೆ ಕಾರಣವಾಯಿತು", ಎಂದು ಫ್ಲೈಟ್ ಡೇಟಾ ರೆಕಾರ್ಡರ್ ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಅನ್ನು ವಿಶ್ಲೇಷಿಸಿದ ನಂತರ ತಂಡವು ಕಂಡುಹಿಡಿದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News