ಗಾಂಧೀಜಿಯವರಂತೆ ನಾನು ಈ ಮಸೂದೆ ಹರಿಯುತ್ತಿದ್ದೇನೆ: ವಕ್ಫ್ ಮಸೂದೆ ಚರ್ಚೆ ವೇಳೆ ಉವೈಸಿ

PC: screengrab/x.com/skphotography
ಹೊಸದಿಲ್ಲಿ: ವಿವಾದಿತ ವಕ್ಫ್ ತಿದ್ದುಪಡಿ ಮಸೂದೆ ಮೇಲಿನ ಚರ್ಚೆ ವೇಳೆ ಮಹಾತ್ಮ ಗಾಂಧೀಜಿಯವರ ಉದಾಹರಣೆಯನ್ನು ಉಲ್ಲೇಖಿಸಿದ ಹೈದರಾಬಾದ್ ಸಂಸದ, ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಪ್ರಜಾಸತ್ತಾತ್ಮಕ ಪ್ರತಿಭಟನೆಯ ಸೂಚಕವಾಗಿ ಮಸೂದೆಯ ಪ್ರತಿಯನ್ನು ಹರಿದು ಹಾಕಿದರು.
"ನೀವು ಇತಿಹಾಸ ಒದಿದರೆ, ಗಾಂಧೀಜಿಯವರು ಬಿಳಿಯರ ದಕ್ಷಿಣ ಆಫ್ರಿಕಾದ ಕಾನೂನುಗಳ ಬಗ್ಗೆ ನಮ್ಮ ಆತ್ಮಸಾಕ್ಷಿ ಇದನ್ನು ಒಪ್ಪುವುದಿಲ್ಲ ಎಂದು ಹೇಳಿ ಅದನ್ನು ಹರಿದು ಹಾಕಿದ್ದರು. ಗಾಂಧೀಜಿಯವರಂತೆ ನಾನು ಕೂಡಾ ಕಾನೂನನ್ನು ಹರಿದು ಹಾಕುತ್ತಿದ್ದೇನೆ" ಎಂದು ಉವೈಸಿ ಹೇಳಿದರು.
"ಇದು ಅಸಂವಿಧಾನಿಕ. ಬಿಜೆಪಿಯು ದೇಗುಲ- ಮಸೀದಿ ಹೆಸರಿನಲ್ಲಿ ದೇಶವನ್ನು ವಿಭಜಿಸಲು ಹೊರಟಿದೆ. ಇದನ್ನು ನಾನು ಖಂಡಿಸುತ್ತೇನೆ ಮತ್ತು 10 ತಿದ್ದುಪಡಿಗಳಿಗಾಗಿ ನಾನು ಮನವಿ ಮಾಡುತ್ತಿದ್ದೇನೆ" ಎಂದು ಸಮರ್ಥಿಸಿಕೊಂಡರು.
"ಅಲ್ಪಸಂಖ್ಯಾತರು ಇದನ್ನು ಒಪ್ಪುವುದಿಲ್ಲ ಎಂದು ಒಬ್ಬ ಸದಸ್ಯ ಹೇಳಿದ್ದಾರೆ. ಭೀತಿ ಹುಟ್ಟಿಸಲು ನೀವು ಯಾರು? ಇದು ಸಂಸತ್ತಿನ ಕಾನೂನು, ಪ್ರತಿಯೊಬ್ಬರೂ ಇದನ್ನು ಅನುಸರಿಸಬೇಕು ಮತ್ತು ಒಪ್ಪಿಕೊಳ್ಳಬೇಕು" ಎಂದು ಗೃಹಸಚಿವ ಅಮಿತ್ ಶಾ ಚರ್ಚೆಯ ವೇಳೆ ನೀಡಿದ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಉವೈಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲ ವಿರೋಧ ಪಕ್ಷಗಳು ಮಸೂದೆಯನ್ನು ವಿರೋಧಿಸಿದ್ದರೂ, ಸಾಕಷ್ಟು ಸಂಖ್ಯಾಬಲ ಹೊಂದಿರುವ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಇತರ ನಿದರ್ಶನಗಳಂತೆ ಘೋಷಣೆ ಕೂಗುವುದು, ಪ್ರತಿಭಟನೆ ಹಾಗೂ ಸಭಾತ್ಯಾಗಗಳು ಇರಲಿಲ್ಲ.