IAF ವಿಂಗ್ ಕಮಾಂಡರ್ ವಿರುದ್ಧ ಅತ್ಯಾಚಾರ ಆರೋಪ; ದೂರು ದಾಖಲಿಸಿದ ಮಹಿಳಾ ಫ್ಲೈಯಿಂಗ್ ಆಫೀಸರ್

Update: 2024-09-10 17:03 GMT

ಸಾಂದರ್ಭಿಕ ಚಿತ್ರ | PC : PTI

ಶ್ರೀನಗರ: ಭಾರತೀಯ ವಾಯುಪಡೆಯ ಮಹಿಳಾ ಫ್ಲೈಯಿಂಗ್ ಆಫೀಸರ್, ವಿಂಗ್ ಕಮಾಂಡರ್ ಮೇಲೆ ಅತ್ಯಾಚಾರದ ಆರೋಪ ಹೊರಿಸಿ ಪೊಲೀಸ್ ದೂರು ದಾಖಲಿಸಿದ್ದಾರೆ ಎಂದು NDTV ವರದಿ ಮಾಡಿದೆ.

ದೂರಿನ ಆಧಾರದ ಮೇಲೆ ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

"ಪ್ರಕರಣದ ಬಗ್ಗೆ ನಮಗೆ ತಿಳಿದಿದೆ. ಸ್ಥಳೀಯ ಪೊಲೀಸ್ ಠಾಣೆ ಬುಡ್ಗಾಮ್ ಈ ವಿಚಾರದಲ್ಲಿ ಶ್ರೀನಗರದಲ್ಲಿರುವ ಭಾರತೀಯ ವಾಯುಪಡೆಯನ್ನು ಸಂಪರ್ಕಿಸಿದೆ. ನಾವು ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ" ಎಂದು ಭಾರತೀಯ ವಾಯುಸೇನೆ ತಿಳಿಸಿದೆ.

ಕಳೆದ ಎರಡು ವರ್ಷಗಳಿಂದ ಕಿರುಕುಳ, ಲೈಂಗಿಕ ದೌರ್ಜನ್ಯ ಮತ್ತು ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇನೆ ಎಂದು ಮಹಿಳಾ ಅಧಿಕಾರಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ.

ಕಳೆದ ಹೊಸ ವರ್ಷಾಚರಣೆ ವೇಳೆ ಆಫೀಸರ್ಸ್ ಮೆಸ್ಸಿನಲ್ಲಿ ನಡೆದ ಪಾರ್ಟಿಯಲ್ಲಿ ಮಹಿಳಾ ಫ್ಲೈಯಿಂಗ್ ಆಫೀಸರ್ ಅವರ ಹಿರಿಯ ಅಧಿಕಾರಿಯಾದ ವಿಂಗ್ ಕಮಾಂಡರ್, ನಿಮಗೆ ಗಿಫ್ಟ್ ಸಿಕ್ಕಿದೆಯಾ ಎಂದು ಮಹಿಳಾ ಅಧಿಕಾರಿಯನ್ನು ಕೇಳಿದ್ದಾರೆ. ಮಹಿಳಾ ಅಧಿಕಾರಿ ಇಲ್ಲ ಎಂದಿದ್ದಕ್ಕೆ, ನನ್ನ ರೂಮ್ ನಲ್ಲಿದೆ. ಬಂದು ಪಡೆದುಕೊಳ್ಳಿ ಎಂದು ವಿಂಗ್ ಕಮಾಂಡರ್ ಹೇಳಿದ್ದಾರೆ ಎನ್ನಲಾಗಿದೆ.

ಅದರಂತೆ ಮಹಿಳಾ ಅಧಿಕಾರಿ ವಿಂಗ್ ಕಮಾಂಡರ್ ಮನೆಗೆ ಹೋದಾಗ, ಅಲ್ಲಿ ಹಿರಿಯ ಅಧಿಕಾರಿಯ ಕುಟುಂಬ ಸದಸ್ಯರು ಯಾರು ಇರದಿರುವುದು ಕಂಡು ಅವರಿಗೆ ಸಂಶಯವಾಗಿದೆ. ಕುಟುಂಬ ಸದಸ್ಯರು ಎಲ್ಲಿ ಎಂದು ಮಹಿಳಾ ಅಧಿಕಾರಿ ಪ್ರಶ್ನಿಸಿದಾಗ, ವಿಂಗ್ ಕಮಾಂಡರ್ ಅವರು ಬೇರೆಡೆ ಇದ್ದಾರೆ ಎಂದು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಳಿಕ ವಿಂಗ್ ಕಮಾಂಡರ್, ಮಹಿಳಾ ಅಧಿಕಾರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ತಡೆಯುವ ಪ್ರಯತ್ನ ಮಾಡಿದರೂ ಹಿರಿಯ ಅಧಿಕಾರಿಯಾದ ವಿಂಗ್ ಕಮಾಂಡರ್ ನನ್ನನ್ನು ಬಿಡಲಿಲ್ಲ. ಮುಂದಿನ ಶುಕ್ರವಾರವೂ ನನ್ನ ಕುಟುಂಬ ಸದಸ್ಯರು ಇರುವುದಿಲ್ಲ. ಆಗ ಮತ್ತೆ ಭೇಟಿಯಾಗೋಣ ಎಂದು ಹೇಳಿದ್ದರು ಎಂದು ಫ್ಲೈಯಿಂಗ್ ಆಫೀಸರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಮಹಿಳಾ ಅಧಿಕಾರಿಯ ಆರಂಭದಲ್ಲಿ ಈ ಬಗ್ಗೆ ಯಾರೊಂದಿಗೂ ಹೇಳಿಕೊಳ್ಳಲು ಹಿಂದೇಟು ಹಾಕಿದ್ದರು ಎನ್ನಲಾಗಿದೆ. ಬಳಿಕ ತನ್ನ ಇಬ್ಬರು ಮಹಿಳಾ ಸಹೋದ್ಯೋಗಿಗಳ ಜೊತೆ ಹಂಚಿಕೊಂಡಾಗ ಅವರು ದೂರ ನೀಡುವಂತೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಬಳಿಕ ಆಂತರಿಕ ಸಮಿತಿಗೆ ಫ್ಲೈಯಿಂಗ್ ಆಫೀಸರ್ ದೂರು ನೀಡಿದ್ದಾರೆ. ಆರಂಭದಲ್ಲಿ ಸರಿಯಾಗಿ ಸ್ಪಂದಿಸದ ಆಂತರಿಕ ಸಮಿತಿ ಬಳಿಕ ಇಬ್ಬರನ್ನೂ ಒಂದೆಡೆ ಕುಳ್ಳಿರಿಸಿ ವಿಚಾರಣೆ ಮಾಡಲು ಮುಂದಾಗಿದೆ. ಆರೋಪಿಯ ಮುಂದೆಯೇ ವಿಚಾರಣೆ ಮಹಿಳಾ ಅಧಿಕಾರಿಗೆ ಸರಿ ಕಂಡು ಬಂದಿಲ್ಲ ಎನ್ನಲಾಗಿದೆ. ಅವರು ಇಬ್ಬರನ್ನು ಪ್ರತ್ಯೇಕ ವಿಚಾರಣೆಗೆ ವಿನಂತಿಸಿದರೂ, ಆ ಬಗ್ಗೆ ಆಂತರಿಕ ಸಮಿತಿಯು ಗಮನಹರಿಸಲಿಲ್ಲ ಎಂದು ಆರೋಪಿಸಿದ್ದಾರೆ.

ಇನ್ನೊಮ್ಮೆ ಆಂತರಿಕ ಸಮಿತಿಗೆ ಈ ಬಗ್ಗೆ ದೂರು ನೀಡಿ ಕ್ರಮ ಕೈಗೊಳ್ಳಲು ಹೇಳಿದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಫ್ಲೈಯಿಂಗ್ ಆಫೀಸರ್ ತಿಳಿಸಿದ್ದಾರೆ. ಘಟನೆಯ ಬಳಿಕ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದವಳಂತೆ ಮಾನಸಿಕವಾಗಿ ಕುಗ್ಗಿದ್ದು, ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಅನಿಸಿತ್ತು ಎಂದು ಮಹಿಳಾ ಅಧಿಕಾರಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಮಹಿಳಾ ಅಧಿಕಾರಿಯು ಮಾನಸಿಕ ಖಿನ್ನತೆಯಿಂದ ಹೊರ ಬರಲು ಬೇರೆಡೆಗೆ ವರ್ಗಾವಣೆ ಕೇಳಿದರೂ ಅವರನ್ನು ಕಡೆಗಣಿಸಲಾಗಿದೆ ಎನ್ನಲಾಗಿದೆ. ರಜೆ ಕೇಳಿದರೂ ನೀಡದೇ ಹಿರಿಯ ಅಧಿಕಾರಿಗಳು ಸತಾಯಿಸಿದರು ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News