“ನಾನು ಮಲಾಲ ಅಲ್ಲ" ಎಂದಿದ್ದ ಕಾಶ್ಮೀರ ಹೋರಾಟಗಾರ್ತಿ ಮತ್ತು ದಿಲ್ಲಿ ಸುಂಕ ಅಧಿಕಾರಿಗಳ ನಡುವಿನ ಜಟಾಪಟಿ ವೀಡಿಯೊ ವೈರಲ್
ಹೊಸದಿಲ್ಲಿ : ನನ್ನ ಬಳಿ ಕೆಲವು ಖಾಲಿ ಬ್ಯಾಗ್‌ಗಳು ಇದ್ದಿದ್ದರಿಂದ ದಿಲ್ಲಿ ವಿಮಾನ ನಿಲ್ದಾಣದ ಕಸ್ಟಮ್ಸ್ ವಿಭಾಗದ ಅಧಿಕಾರಿಗಳು ನನಗೆ ಕಿರುಕುಳ ನೀಡಿದ್ದಾರೆ ಎಂದು ಕಾಶ್ಮೀರಿ ಹೋರಾಟಗಾರ್ತಿ ಯಾನಾ ಮೀರ್ ಆರೋಪಿಸಿದ್ದಾರೆ. ಇತ್ತೀಚೆಗೆ ಬ್ರಿಟಿಷ್ ಸಂಸತ್ ಭವನದಲ್ಲಿ "ನಾನು ಮಲಾಲ ಯೂಸುಫ್‌ಝಾಯ್ ಅಲ್ಲ. ಏಕೆಂದರೆ, ನಾನು ನನ್ನ ಮಾತೃ ದೇಶದಿಂದ ಎಂದಿಗೂ ಪರಾರಿಯಾಗುವುದಿಲ್ಲ" ಎಂದು ಹೇಳುವ ಮೂಲಕ ಅವರು ಮುಖಪುಟದ ಸುದ್ದಿಯಾಗಿದ್ದರು.
ನಾನು ಲಂಡನ್‌ನಿಂದ ಮರಳಿ ಬಂದಾಗ ನನ್ನನ್ನು ವಿಮಾನ ನಿಲ್ದಾಣದಲ್ಲಿ ಕಳ್ಳರನ್ನು ನಡೆಸಿಕೊಳ್ಳುವಂತೆ ನಡೆಸಿಕೊಳ್ಳಲಾಗಿದೆ ಎಂದು ಯಾನಾ ಮೀರ್ ದೂರಿದ್ದಾರೆ. ಈ ನಡುವೆ, ಯಾನಾ ಮೀರ್ ಆರೋಪವನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಯಾನಾ ಮೀರ್ ವೀಡಿಯೊವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಸುಂಕದ ಅಧಿಕಾರಿಗಳು ಆಕೆಯ ಲಗೇಜು ಬ್ಯಾಗ್‌ಗಳನ್ನು ತಪಾಸಣೆಗೊಳಪಡಿಸುತ್ತಿರುವ ದೃಶ್ಯವಿದೆ. ಆ ವೀಡಿಯೊದಲ್ಲಿ ಯಾನಾ ಮೀರ್ ಅವರು ಸುಂಕದ ಅಧಿಕಾರಿಗಳೊಂದಿಗೆ ಜಟಾಪಟಿಗೆ ಇಳಿದು, “ನೀವು ನನಗೆ ಕಿರುಕುಳ ನೀಡುತ್ತಿದ್ದೀರಿ” ಎಂದು ಆರೋಪಿಸುತ್ತಿರುವುದನ್ನು ಕಾಣಬಹುದು.
"ನಾನು ಲಗೇಜ್ ಗಳನ್ನು ತೆರೆಯುವಂತೆ ಏಕೆ ಮಾಡುತ್ತಿದ್ದೀರಿ? ನೀವೇನಾದರೂ ನಿಮ್ಮ ತಂಡಕ್ಕೆ ನಾನು ಏನು ಮಾಡಿ ಬಂದಿದ್ದೇನೆ ಎಂದು ಹೇಳಿದ್ದೀರಾ?" ಎಂದು ಅಧಿಕಾರಿಯೊಬ್ಬರನ್ನು ಯಾನಾ ಮೀರ್ ಪ್ರಶ್ನಿಸುತ್ತಿರುವುದು ವೀಡಿಯೊದಲ್ಲಿದೆ. ಆಕೆಯನ್ನು ಸಮಾಧಾನ ಪಡಿಸಲು ಪ್ರಯತ್ನಿಸಿರುವ ಅಧಿಕಾರಿಯೊಬ್ಬರು, “ಇದನ್ನು ಬಿಟ್ಟುಬಿಡಿ” ಎಂದು ಮನವಿ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ, "ನಾನಿದನ್ನು ಬಿಟ್ಟು ಬಿಡುವುದಿಲ್ಲ. ಇದು ಮುಜಗರದ ಸಂಗತಿಯಾಗಿದೆ. ಎಲ್ಲರ ಎದುರೇ ನನ್ನ ಲಗೇಜು ಬ್ಯಾಗನ್ನು ತೆರೆಯಲಾಗಿದ್ದು, ಅದರ ಮೇಲ್ಭಾಗದಲ್ಲಿ ಏನಾದರೂ ಇರಬಹುದಿತ್ತು. ತೊಳೆಯಬೇಕಾದ ಬಟ್ಟೆಗಳು ಅಥವಾ ಇನ್ನೇನಾದರೂ ಇದ್ದಿದ್ದರೆ?" ಎಂದು ಮೀರ್ ಆ ಅಧಿಕಾರಿಯೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ.
"ಅವರು ನನಗೆ ಕಿರುಕುಳ ನೀಡುತ್ತಿದ್ದಾರೆ. ಅವರು ನನ್ನ ಬ್ಯಾಗನ್ನು ಸ್ಕ್ಯಾನ್ ಮಾಡಿದರು. ಬಿಚ್ಚಿ ನೋಡಿದರು. ಅವರಿಗೆ ನನ್ನ ಖಾಲಿ ಲೂಯಿ ವಿಟಾನ್ ಬ್ಯಾಗ್‌ಗಳಿಗೆ ಸುಂಕ ಹೇರಬೇಕಿರುವುದರಿಂದ ನನ್ನನ್ನು ಕಾಯುವಂತೆ ಮಾಡಿದ್ದಾರೆ. ಇವು ಶಾಪಿಂಗ್ ಗೆ ಬಳಸುವ ಬ್ಯಾಗ್‌ಗಳಾಗಿದ್ದು, ಅವರು ಇದಕ್ಕೆ ಸುಂಕ ವಿಧಿಸಬೇಕಿದೆ ಎನ್ನುತ್ತಿದ್ದಾರೆ. ಈ ದೇಶದಲ್ಲಿ ಪ್ರಜೆಗಳನ್ನು ಈ ಬಗೆಯಲ್ಲಿ ಉಪಚರಿಸಲಾಗುತ್ತದೆ" ಎಂದು ಯಾನಾ ಮೀರ್ ಹೇಳುತ್ತಿರುವುದನ್ನು ವೀಡಿಯೊದಲ್ಲಿ ಕೇಳಿಸುತ್ತಿದೆ.
ವೀಡಿಯೊದಲ್ಲಿ ಅವರು ಶಾಪಿಂಗ್ ಗೆ ಬಳಸುವ ಖಾಲಿ ಬ್ಯಾಗ್‌ಗಳನ್ನು ತೋರಿಸಿದ್ದಾರೆ. ಆ ಬ್ಯಾಗ್‌ಗಳನ್ನು ನನ್ನ ನಾದಿನಿ ನೀಡಿದ್ದು ಎಂದು ಆಕೆ ಹೇಳಿಕೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಯುವ ಸಮಾಜದೊಂದಿಗೆ ಗುರುತಿಸಿಕೊಂಡಿರುವ ಯಾನಾ ಮೀರ್, ಬ್ರಿಟಿಷ್ ಸಂಸತ್ ಭವನದಲ್ಲಿ ಜಮ್ಮು ಮತ್ತು ಕಾಶ್ಮೀರ ಅಧ್ಯಯನ ಕೇಂದ್ರ ಗ್ರೇಟ್ ಬ್ರಿಟನ್ (ಜೆಕೆಎಸ್‌ಸಿ) ಹಮ್ಮಿಕೊಂಡಿದ್ದ 'ಸಂಕಲ್ಪ ದಿವಸ್" ಅನ್ನು ಉದ್ದೇಶಿಸಿ ಕೆಲದಿನಗಳ ಹಿಂದೆ ಮಾತನಾಡಿದ್ದರು.
ವಿಮಾನ ನಿಲ್ದಾಣದಲ್ಲಿ ಚಿತ್ರೀಕರಿಸಲಾಗಿರುವ ವೀಡಿಯೊದಲ್ಲಿ ಬ್ರಿಟನ್‌ನಲ್ಲಿನ ತಮ್ಮ ಭಾಷಣಕ್ಕೆ ಪೂರಕವಾಗಿ ಹಲವಾರು ಉಲ್ಲೇಖಗಳನ್ನು ಮೀರ್ ನೀಡಿದ್ದಾರೆ. "ಇತ್ತೀಚೆಗಷ್ಟೇ ನಾನು ಎಲ್ಲ ಲಂಡನ್ ವಾಹಿನಿಗಳೊಂದಿಗೆ ಭಾರತೀಯರು ಉತ್ತಮರು ಹಾಗೂ ಸೌಹಾರ್ದಯುತ ವ್ಯಕ್ತಿಗಳಾಗಿದ್ದು, ನಾವು ಲಂಡನ್‌ನಲ್ಲಿ ನಿರಾಶ್ರಿತರಂತೆ ಜೀವಿಸಬೇಕಾದ ಅಗತ್ಯವಿಲ್ಲ ಎಂದು ಹೇಳಿದ್ದೆ. ನಾವು ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಖರೀದಿಸುತ್ತೇವೆ. ಆದರೆ, ನೀವು ತವರಿಗೆ ಮರಳಿದಾಗ ನಿಮ್ಮನ್ನು ಕಳ್ಳರಂತೆ ನಡೆಸಿಕೊಳ್ಳಲಾಗುತ್ತದೆ" ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಂಕದ ಅಧಿಕಾರಿ ನನ್ನನ್ನು ಮಾದಕ ದ್ರವ್ಯ ಕಳ್ಳ ಸಾಗಣೆದಾರಳಂತೆ ನಡೆಸಿಕೊಂಡರು ಎಂದು ಆಕೆ ಆರೋಪಿಸಿದ್ದಾರೆ. ಲಂಡನ್ ನಿವಾಸಿಗಳು ನನ್ನನ್ನು ಭಾರತೀಯ ಮಾಧ್ಯಮ ಯೋಧೆ ಎಂದು ತಿಳಿದುಕೊಂಡಿದ್ದರೆ, ದಿಲ್ಲಿ ಸುಂಕದ ಅಧಿಕಾರಿಗಳು ನನ್ನನ್ನು ಕುಖ್ಯಾತ ಕಳ್ಳ ಸಾಗಣೆದಾರೆ ಎಂದು ತಿಳಿದಿದ್ದಾರೆ ಎಂದು ಯಾನಾ ಮೀರ್ ಕಿಡಿಕಾರಿದ್ದಾರೆ.
ಇದಕ್ಕೆ ಪ್ರತಿಯಾಗಿ ದಿಲ್ಲಿ ಸುಂಕ ಇಲಾಖೆಯೂ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದು, ಅಂತರರಾಷ್ಟ್ರೀಯ ಪ್ರಯಾಣಿಕರಿಗಿರುವ ಮಾನ ದಂಡದ ಪ್ರಕಾರ, ಯಾನಾ ಮೀರ್ ಅವರ ಲಗೇಜುಗಳನ್ನು ತಪಾಸಣೆಗೊಳಪಡಿಸಲಾಗಿದೆ ಎಂದು ಸ್ಪಷ್ಟೀಕರಣ ನೀಡಿದೆ.
"ವಿದೇಶಿ ಪ್ರಯಾಣಿಕರ ಬ್ಯಾಗ್‌ಗಳನ್ನು ನಿಯಮಿತವಾಗಿ ತಪಾಸಣೆ ಮಾಡಲಾಗುತ್ತದೆ. ಇತರ ಪ್ರಯಾಣಿಕರು ನಿರಾಯಾಸವಾಗಿ ತಮ್ಮ ಲಗೇಜುಗಳನ್ನು ಸ್ಕ್ಯಾನರ್ ಒಳಗೆ ಹಾಕಿದರೆ, ಯಾನಾ ಮೀರ್ ಮಾತ್ರ ಅನಗತ್ಯವಾಗಿ ಅದರಿಂದ ತಪ್ಪಿಸಿಕೊಳ್ಳಲು ಯತ್ನಿಸಿದರು. ಈ ಸಂದರ್ಭದುದ್ದಕ್ಕೂ ನಮ್ಮ ಸಿಬ್ಬಂದಿಗಳು ಸೌಜನ್ಯಯುತ ನಡವಳಿಕೆ ಪ್ರದರ್ಶಿಸಿದರು. ಸವಲತ್ತುಗಳು ಕಾನೂನಿಗಿಂತ ಮೇಲಲ್ಲ. ದೃಶ್ಯಾವಳಿ ಎಲ್ಲ ಕತೆಯನ್ನೂ ಹೇಳುತ್ತದೆ" ಎಂದು ದಿಲ್ಲಿ ಸುಂಕ ಇಲಾಖೆ ತನ್ನ ಪೋಸ್ಟ್ ನಲ್ಲಿ ಬರೆದುಕೊಂಡಿದೆ.
ಒಂದು ಲಗೇಜು ಬ್ಯಾಗನ್ನು ತಪಾಸಣೆಗೊಳಪಡಿಸಬೇಕು ಎಂಬ ಅಧಿಕಾರಿಗಳ ಮನವಿಗೆ ಯಾನಾ ಮೀರ್ ಸಹಕರಿಸಲಿಲ್ಲವೆಂದೂ ಅವರು ಆರೋಪಿಸಿದ್ದಾರೆ.
ಯಾನಾ ಮೀರ್ ಅವರ ಕಿರುಕುಳದ ಆರೋಪಕ್ಕೆ ಪ್ರತಿಯಾಗಿ, "ಕೊನೆಗೆ ವಿಮಾನ ಯಾನ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಸುಂಕದ ಅಧಿಕಾರಿಗಳು ಅಕೆಯ ಬ್ಯಾಗನ್ನು ದೃಶ್ಯಾವಳಿಯಲ್ಲಿ ಕಂಡು ಬರುತ್ತಿರುವಂತೆ ತಪಾಸಣೆಗಾಗಿ ಕೊಂಡೊಯ್ದರು" ಎಂದು ಸುಂಕದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೌಜನ್ಯ: indiatoday. in