ಸ್ಥಗಿತಗೊಂಡಿದ್ದ ಧ್ರುವ ಹೆಲಿಕಾಪ್ಟರ್‌ಗಳು ಪಹಲ್ಗಾಮ್ ದಾಳಿಯ ಬಳಿಕ ಮತ್ತೆ ಅನಂತನಾಗ್ ಪ್ರದೇಶದಲ್ಲಿ ಹಾರಾಟ!

Update: 2025-04-24 17:37 IST
ಸ್ಥಗಿತಗೊಂಡಿದ್ದ ಧ್ರುವ ಹೆಲಿಕಾಪ್ಟರ್‌ಗಳು ಪಹಲ್ಗಾಮ್ ದಾಳಿಯ ಬಳಿಕ ಮತ್ತೆ ಅನಂತನಾಗ್ ಪ್ರದೇಶದಲ್ಲಿ ಹಾರಾಟ!

Photo credit: newsx.com

  • whatsapp icon

ಜಮ್ಮು: ಜನವರಿಯಲ್ಲಿ ಸಂಭವಿಸಿದ್ದ ಅಪಘಾತದ ಬಳಿಕ ಧ್ರುವ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್(ಎಎಲ್‌ಎಚ್)ಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ ಬಳಿಕ ಸಶಸ್ತ್ರ ಪಡೆಗಳು ಹೆಲಿಕಾಪ್ಟರ್‌ಗಳ ತೀವ್ರ ಕೊರತೆಯನ್ನು ಎದುರಿಸುತ್ತಿವೆ, ಆದರೆ ಈಗ ಪಹಲ್ಗಾಮ್ ದಾಳಿಯ ಬಳಿಕ ಧ್ರುವ ಹೆಲಿಕಾಪ್ಟರ್‌ಗಳ ಹಾರಾಟ ಅನಂತನಾಗ್ ಪ್ರದೇಶದಲ್ಲಿ ಪುನರಾರಂಭಗೊಂಡಿದೆ ಎಂದು thehindu.com ವರದಿ ಮಾಡಿದೆ.

ಅಗತ್ಯದ ಆಧಾರದಲ್ಲಿ ಎಎಲ್‌ಎಚ್‌ಗಳನ್ನು ಬಳಸಲು ಕೇಂದ್ರ ರಕ್ಷಣಾ ಸಚಿವಾಲಯವು ಕಾರ್ಯಾಚರಣೆಯನ್ನು ನಿರ್ವಹಿಸುತ್ತಿರುವ ಗ್ರೌಂಡ್ ಕಮಾಂಡರ್‌ಗೆ ಅನುಮತಿಯನ್ನು ನೀಡಿದೆ ಎಂದು ರಕ್ಷಣಾ ಮೂಲಗಳು ಬುಧವಾರ ತಿಳಿಸಿವೆ.

ಜ.5ರಂದು ಭಾರತೀಯ ತಟರಕ್ಷಣಾ ಪಡೆಯ ಧ್ರುವ ALH-MkIII ಗುಜರಾತಿನ ಪೋರಬಂದರಿನಲ್ಲಿ ಪತನಗೊಂಡು ಅದರಲ್ಲಿದ್ದ ಇಬ್ಬರು ಪೈಲಟ್‌ಗಳು ಸೇರಿದಂತೆ ಮೂವರು ಸಿಬ್ಬಂದಿಗಳು ಮೃತಪಟ್ಟಿದ್ದರು. ಈ ಘಟನೆಯ ಬಳಿಕ ಸುರಕ್ಷತಾ ತಪಾಸಣೆಗಾಗಿ ಮೂರೂ ಸಶಸ್ತ್ರಪಡೆಗಳು ಮತ್ತು ತಟರಕ್ಷಣಾ ಪಡೆ ಹೊಂದಿದ್ದ 300ಕ್ಕೂ ಅಧಿಕ ಧ್ರುವ ಹೆಲಿಕಾಪ್ಟರ್‌ಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಅವುಗಳ ಹಾರಾಟ ಇನ್ನೂ ಪುನರಾರಂಭಗೊಂಡಿಲ್ಲ, ಇದು ಕಾರ್ಯಾಚರಣೆಗಳಿಗೆ ಗಣನೀಯ ಅಡ್ಡಿಯನ್ನುಂಟು ಮಾಡಿದೆ.

ಕಾಶ್ಮೀರದಲ್ಲಿಯ ಪರಿಸ್ಥಿತಿ ಕುರಿತಂತೆ ರಕ್ಷಣಾ ಮೂಲಗಳು ಸುಮಾರು 125-130ರಷ್ಟು ಭಯೋತ್ಪಾದಕರು ಸಕ್ರಿಯರಾಗಿದ್ದಾರೆ ಎಂದು ಅಂದಾಜಿಸಲಾಗಿದ್ದು, ಈ ಪೈಕಿ 115-120ರಷ್ಟು ಪಾಕಿಸ್ತಾನಿ ಪ್ರಜೆಗಳಾಗಿದ್ದಾರೆ ಎಂದು ತಿಳಿಸಿವೆ.

ಜಮ್ಮುಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಪ್ರದೇಶದಲ್ಲಿ ನೆಲೆಸಿರುವ ಸಾಮಾನ್ಯ ಸ್ಥಿತಿಯನ್ನು ಕದಡುವುದು ಮತ್ತು ಶಾಂತಿಯನ್ನು ಭಂಗಗೊಳಿಸುವುದು ಈ ದಾಳಿಯ ಉದ್ದೇಶವಾಗಿರುವಂತೆ ಕಂಡು ಬರುತ್ತಿದೆ ಎಂದು ರಕ್ಷಣಾ ಮೂಲಗಳು ಕಳೆದೆರಡು ವರ್ಷಗಳಲ್ಲಿ ಪ್ರವಾಸಿಗಳು ಮತ್ತು ಅಮರನಾಥ ಯಾತ್ರಿಗಳ ಹೆಚ್ಚಿನ ಸಂಖ್ಯೆಯನ್ನು ಉಲ್ಲೇಖಿಸಿ ಹೇಳಿವೆ.

ನಿರ್ದಿಷ್ಟ ಗುಪ್ತಚರ ಮಾಹಿತಿಯ ಕೊರತೆಯು ದೊಡ್ಡ ಲೋಪವಾಗಿತ್ತು ಎಂದು ಬಲ್ಲ ಮೂಲಗಳು ತಿಳಿಸಿವೆ. ಎರಡು ವಾರಗಳ ಹಿಂದೆ ಸಂಭವನೀಯ ಬೆದರಿಕೆಯ ಬಗ್ಗೆ ಸಾಮಾನ್ಯ ಎಚ್ಚರಿಕೆಯನ್ನು ಹೊರಡಿಸಲಾಗಿತ್ತು ಮತ್ತು ಮುಂಬರುವ ಅಮರನಾಥ ಯಾತ್ರೆಯ ಮೇಲೆ ಗಮನವನ್ನು ಕೇಂದ್ರೀಕರಿಸಲಾಗಿತ್ತು, ಆದರೆ ಪಹಲ್ಗಾಮ್‌ನಲ್ಲಿ ಸಂಭವನೀಯ ದಾಳಿಯ ಬಗ್ಗೆ ಯಾವುದೇ ಸುಳಿವುಗಳಿರಲಿಲ್ಲ. ಘಟನಾ ತಾಣದ ಸುತ್ತಲಿನ ಸುಮಾರು ಹತ್ತು ಸ್ಥಳಗಳಲ್ಲಿ ಭದ್ರತಾ ಸಿಬ್ಬಂದಿಗಳು ಉಪಸ್ಥಿತರಿರಲಿಲ್ಲ ಮತ್ತು ಪ್ರವಾಸಿ ತಾಣಗಳಲ್ಲಿ ವಿದ್ಯುನ್ಮಾನ ಕಣ್ಗಾವಲಿನ ಕೊರತೆಯಿದೆ ಎಂದು ಈ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News