ತೀವ್ರಗೊಂಡ ಬಿಸಿ ಗಾಳಿ: ರಾಷ್ಟ್ರ ರಾಜಧಾನಿಯಲ್ಲಿ ನೀರಿಗಾಗಿ ಹಾಹಾಕಾರ; ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದಿಲ್ಲಿ ಸರಕಾರ

Update: 2024-05-31 07:10 GMT

PC : PTI 

ಹೊಸದಿಲ್ಲಿ: ತೀವ್ರಗೊಂಡಿರುವ ಬಿಸಿ ಗಾಳಿಯಿಂದಾಗಿ ದಿಲ್ಲಿಯಲ್ಲಿ ನೀರಿಗಾಗಿ ಹಾಹಾಕಾರ ತಲೆದೋರಿದ್ದು, ಒಂದು ತಿಂಗಳ ಮಟ್ಟಿಗೆ ಹರ್ಯಾಣ, ಉತ್ತರ ಪ್ರದೇಶ ಹಾಗೂ ಹಿಮಾಚಲ ಪ್ರದೇಶದಿಂದ ರಾಷ್ಟ್ರ ರಾಜಧಾನಿಗೆ ಹೆಚ್ಚುವರಿ ನೀರು ಪೂರೈಸಲು ನಿರ್ದೇಶನ ನೀಡಬೇಕು ಎಂದು ದಿಲ್ಲಿಯ ಆಪ್ ಸರಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ಸ್ವರೂಪದ ಧಗೆ ಇರುವುದರಿಂದ ನೀರಿಗಾಗಿನ ಬೇಡಿಕೆ ಹೆಚ್ಚಳಗೊಂಡಿದೆ ಎಂದು ದಿಲ್ಲಿ ಸರಕಾರವು ತನ್ನ ಅರ್ಜಿಯಲ್ಲಿ ಪ್ರತಿಪಾದಿಸಿದೆ.

“ದಿಲ್ಲಿಯಲ್ಲಿ ಬಿಸಿಲ ಧಗೆ ತೀವ್ರಗೊಂಡಿರುವುದರಿಂದ ನೀರಿನ ಅಗತ್ಯತೆ ಹೆಚ್ಚಳಗೊಂಡಿದೆ. ರಾಷ್ಟ್ರ ರಾಜಧಾನಿಯ ಅಗತ್ಯವನ್ನು ಪೂರೈಸುವುದು ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ” ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಬಿಸಿಲ ಝಳ ತೀವ್ರವಾಗಿರುವುದರಿಂದ ದಿಲ್ಲಿಯಾದ್ಯಂತ ನೀರಿಗಾಗಿ ಹಾಹಾಕಾರ ಪ್ರಾರಂಭಗೊಂಡಿದೆ. ಈ ಪೈಕಿ ಚಾಣಕ್ಯಪುರಿಯಲ್ಲಿನ ಸಂಜಯ್ ಕ್ಯಾಂಪ್ ‍ಪ್ರದೇಶ ಹಾಗೂ ಗೀತಾ ಕಾಲನಿಗಳಲ್ಲಿ ತೀವ್ರ ನೀರಿನ ಕೊರತೆ ತಲೆದೋರಿದೆ. ಇದರಿಂದಾಗಿ ಜನರು ನೀರಿಗಾಗಿ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದ್ದು, ಬಿಸಿಲಿನ ಝಳದ ನಡುವೆಯೂ ಒಂದು ಬಕೆಟ್ ನೀರನ್ನಾದರೂ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ದಿಲ್ಲಿಯಾದ್ಯಂತ ಟ್ಯಾಂಕರ್ ನೀರಿಗಾಗಿ ಉದ್ದನೆಯ ಸರತಿ ಸಾಲು ನಿಲ್ಲುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ.

ದಿಲ್ಲಿಯ ಗರಿಷ್ಠ ತಾಪಮಾನವು ದಾಖಲೆಯ 50 ಡಿಗ್ರಿ ಸೆಲ್ಸಿಯಸ್ ಸಮೀಪಕ್ಕೆ ತಲುಪಿದ್ದು, ಕನಿಷ್ಠ ತಾಪಮಾನವು 30 ಡಿಗ್ರಿ ಸೆಲ್ಸಿಯಸ್ ನಷ್ಟಿದೆ. ಈ ಪ್ರಮಾಣವು ಸಾಧಾರಣಕ್ಕಿಂತ 2.8 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಿನದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News