ಗಡಿಯಲ್ಲಿ ಚೀನಾದ ಅತಿಕ್ರಮಣದ ಬಗ್ಗೆ ಶ್ವೇತಪತ್ರ ಹೊರಡಿಸಿ : ಮೋದಿ ಸರಕಾರಕ್ಕೆ ಕಾಂಗ್ರೆಸ್ ಸವಾಲು
ಹೊಸದಿಲ್ಲಿ : ಇಂದಿರಾಗಾಂಧಿ ಅವರ ಆಡಳಿತ ಅವಧಿಯಲ್ಲಿ ಭಾರತವು ಕಚ್ಛತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಟ್ಟಿತ್ತು ಎಂಬ ಬಿಜೆಪಿಯ ಆರೋಪದ ವಿರುದ್ಧ ಪ್ರತಿದಾಳಿ ನಡೆಸಿರುವ ಕಾಂಗ್ರೆಸ್ ಪಕ್ಷವು ಭಾರತದ ಗಡಿಯುದ್ದಕ್ಕೂ ಚೀನಾವು ನಡೆಸಿರುವ ಅತಿಕ್ರಮಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಶ್ವೇತಪತ್ರವನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದೆ.
ಚೆನ್ನೈನಲ್ಲಿ ರವಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಕೆ. ಸೆಲ್ವಪೆರುತಂಗಾಯ್ ಅವರು ಬಿಜೆಪಿಯ ಆರೋಪಗಳಿಗೆ ಪ್ರತಿಕ್ರಿಯಿಸುತ್ತಾ ‘‘ ಮೊದಲಿಗೆ ನೀವು (ಬಿಜೆಪಿಗರು) , ಚೀನಾ ಗಡಿಯಲ್ಲಿ ಏನು ನಡೆಯುತ್ತಿದೆ. ಅರುಣಾಚಲ ಪ್ರದೇಶ ಹಾಗೂ ಲಡಾಖ್ ನಲ್ಲಿ ಎಷ್ಟು ಚದರ ಕಿ.ಮೀ. ಪ್ರದೇಶವನ್ನು ಚೀನಾ ವಶಪಡಿಸಿಕೊಂಡಿದೆಯೆಂದು ಪ್ರಧಾನಿಯವರನ್ನು ಕೇಳಬೇಕು. ಈ ಬಗ್ಗೆ ಶ್ವೇತಪತ್ರವನ್ನು ಹೊರಡಿಸುವಂತೆ ಅವರನ್ನು ಒತ್ತಾಯಿಸಬೇಕು ’’ ಎಂದರು.
ಕಚ್ಚತೀವು ದ್ವೀಪದ ವಿಷಯದಲ್ಲಿ ಕೇಂದ್ರ ಸರಕಾರದ ನಿಲುವನ್ನು ಪ್ರಶ್ನಿಸಿದ ಸೆಲ್ವಪೆರುತಂಗಳ್ ಅವರು, ಈ ದ್ವೀಪವನ್ನು ಶ್ರೀಲಂಕಾದಿಂದ ಮರಳಿ ಪಡೆಯಲು ಪ್ರಧಾನಿ ಮೋದಿಯವರು ಏನು ಮಾಡಿದ್ದಾರೆ ಎಂದು ಕೇಳಿದರು.
ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರವು ನಿರ್ಭಾವುಕವಾಗಿ ಕಚ್ಛತೀವು ದ್ವೀಪವನ್ನು ಶ್ರೀಲಂಕಾಕ್ಕೆ ಒಪ್ಪಿಸಿತೆಂದು ಮೋದಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಆಪಾದಿಸಿದ್ದರು. ತಮಿಳುನಾಡು ಬಿಜೆಪಿ ಅಧ್ಯಕ್ಶ ಅಣ್ಣಾಮಲೈ ಅವರು ಆರ್ ಟಿ ಐ ಅರ್ಜಿ ಮೂಲಕ ಪಡೆದಿದ್ದ ಉತ್ತರವನ್ನು ಅವರು ಉಲ್ಲೇಖಿಸಿದ್ದರು.
‘‘ಕಣ್ಣು ತೆರೆಯುವಂತಹ ಹಾಗೂ ವಿಚಲಿತಗೊಳಿಸುವಂತಹ ವಿಷಯ. ಕಚ್ಛತೀವು ದ್ವೀಪವನ್ನು ಕಾಂಗ್ರೆಸ್ , ನಿರ್ಭಾವುಕವಾಗಿ ಬಿಟ್ಟುಕೊಟ್ಟಿತ್ತು. ಇದು ಪ್ರತಿಯೊಬ್ಬ ಭಾರತೀಯನನ್ನೂ ರೋಷಗೊಳಿಸಿದೆ. ನಾವು ಎಂದಿಗೂ ಕಾಂಗ್ರೆಸ್ ನಲ್ಲಿ ನಂಬಿಕೆಯಿಡಬಾರದು ಎಂಬುದನ್ನು ಜನತೆಯ ಮನದಲ್ಲಿ ಮರುದೃಢೀಕರಿಸಿದೆ ’’ ಎಂದು ಮೋದಿ ಟ್ವೀಟ್ ಮಾಡಿದ್ದರು.