"ಜಾತಿ ವ್ಯವಸ್ಥೆಯೇ ಇಲ್ಲದಿದ್ದರೆ ಎಲ್ಲಿಯ ಬ್ರಾಹ್ಮಣ್ಯ?..": ಫುಲೆ ಚಿತ್ರದ ಕುರಿತ ವಿವಾದದ ಬಗ್ಗೆ ಸಿಬಿಎಫ್‌ಸಿಗೆ ಅನುರಾಗ್ ಕಶ್ಯಪ್ ತರಾಟೆ

ನಿರ್ಮಾಪಕ ಅನುರಾಗ್ ಕಶ್ಯಪ್ | PC: imdb.com
ಹೊಸದಿಲ್ಲಿ: ಅನಂತ್ ಮಹಾದೇವನ್ ನಿರ್ದೇಶನದ ಫುಲೆ ಚಿತ್ರದ ಕುರಿತ ವಿವಾದದ ಬಗ್ಗೆ ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಪ್ರತಿಕ್ರಿಯಿಸಿದ್ದು, ಫುಲೆ ಚಿತ್ರ ಬಿಡುಗಡೆಗೆ ತಡೆ ನೀಡಿರುವ ಬಗ್ಗೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್(ಸಿಬಿಎಫ್‌ಸಿ)ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಫುಲೆ ಚಿತ್ರವು ನಮ್ಮ ಸಮುದಾಯವನ್ನು ಅವಮಾನಿಸುತ್ತದೆ ಎಂದು ಬ್ರಾಹ್ಮಣ ಸಮುದಾಯದ ಒಂದು ವರ್ಗ ಚಿತ್ರದ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ ಹಿನ್ನಲೆ ಪುಲೆ ಚಿತ್ರದ ಬಿಡುಗಡೆ ಸ್ಥಗಿತಗೊಳಿಸಲಾಗಿದೆ.
ಈ ಕುರಿತು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್, ಧಡಕ್ 2 ಚಿತ್ರ ಪ್ರದರ್ಶನದಲ್ಲಿ ಪ್ರಧಾನಿ ಮೋದಿ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಿದ್ದಾರೆ ಎಂದು CBFC ಹೇಳಿದೆ. ಅದನ್ನೇ ಆಧಾರವಾಗಿಟ್ಟುಕೊಂಡು ಭಾರತದಲ್ಲಿ ʼಸಂತೋಷ್ʼ ಸಿನಿಮಾ ಬಿಡುಗಡೆಗೆ ಅನುಮತಿಸಿಲ್ಲ ಎಂದು ಹೇಳಿದರು.
ಆದರೆ ಈಗ, ಬ್ರಾಹ್ಮಣರಿಗೆ ಫುಲೆಯಿಂದಾಗಿ ಸಮಸ್ಯೆ ಇದೆ. ಜಾತಿ ವ್ಯವಸ್ಥೆಯೇ ಇಲ್ಲದಿದ್ದರೆ ಎಲ್ಲಿಯ ಬ್ರಾಹ್ಮಣ್ಯ?..ನೀವು ಯಾರು? ಜಾತಿ ವ್ಯವಸ್ಥೆಯೇ ಇಲ್ಲದಿದ್ದರೆ ಚಿತ್ರದ ಬಗ್ಗೆ ಬ್ರಾಹ್ಮಣರು ಏಕೆ ಆಕ್ರೋಶಗೊಂಡಿದ್ದಾರೆ. ಜ್ಯೋತಿರಾವ್ ಮತ್ತು ಸಾವಿತ್ರಿಬಾಯಿ ಫುಲೆ ಯಾರಾಗಿದ್ದರು? ಜಾತಿ ವ್ಯವಸ್ಥೆ ಈಗ ಅಸ್ತಿತ್ವದಲ್ಲಿದೆಯೇ ಅಥವಾ ಇಲ್ಲವೇ? ಎಂದು ಪ್ರಶ್ನಿಸಿದರು.
ʼಭಾರತದಲ್ಲಿ ಜಾತಿ ವ್ಯವಸ್ಥೆ ಇಲ್ಲ ಎಂಬ ಮೋದಿಜಿಯವರ ಹೇಳಿಕೆಯ ಪ್ರಕಾರ ಭಾರತದಲ್ಲಿ ಬ್ರಾಹ್ಮಣತ್ವ ಅಸ್ತಿತ್ವದಲ್ಲಿಲ್ಲ? ಅಥವಾ ನೀವೆಲ್ಲರೂ ಒಟ್ಟಾಗಿ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದೀರಾ?ʼ ಎಂದು ಅನುರಾಗ್ ಕಶ್ಯಪ್ ಪ್ರಶ್ನಿಸಿದರು.