ಮಸೀದಿಯೊಳಗೆ ಜೈ ಶ್ರೀರಾಮ್ ಕೂಗುವುದು ಹೇಗೆ ಅಪರಾಧವಾಗುತ್ತದೆ?: ಸುಪ್ರೀಂಕೋರ್ಟ್ ಪ್ರಶ್ನೆ
ಹೊಸದಿಲ್ಲಿ: ಮಸೀದಿಯೊಳಗೆ 'ಜೈ ಶ್ರೀರಾಮ್' ಎಂದು ಘೋಷಣೆ ಕೂಗುವುದು ಹೇಗೆ ಅಪರಾಧವಾಗುತ್ತದೆ ಎಂದು ಪ್ರಶ್ನಿಸಿದ ಸುಪ್ರೀಂಕೋರ್ಟ್ ಈ ಕುರಿತು ಕರ್ನಾಟಕ ಪೊಲೀಸರ ನಿಲುವನ್ನು ಕೇಳಿದೆ.
ಮಸೀದಿ ಆವರಣದಲ್ಲಿ 'ಜೈ ಶ್ರೀರಾಮ್' ಘೋಷಣೆ ಕೂಗಿದ್ದಕ್ಕಾಗಿ ಇಬ್ಬರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮಸೀದಿಯೊಳಗೆ 'ಜೈ ಶ್ರೀರಾಮ್' ಎಂದು ಕೂಗುವುದು ಹೇಗೆ ಅಪರಾಧವಾಗುತ್ತದೆ? ಎಂದು ಪ್ರಶ್ನಿಸಿದೆ.
ನ್ಯಾಯಮೂರ್ತಿಗಳಾದ ಪಂಕಜ್ ಮಿಥಾಲ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠ, ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತ್ತೂರು ಗ್ರಾಮದ ಮರ್ಧಾಳದ ಬದ್ರಿಯಾ ಜುಮ್ಮಾ ಮಸೀದಿ ಪರ ಹೈದರ್ ಅಲಿ ಎಂಬವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸುತ್ತಿದೆ.
ಅರ್ಜಿದಾರರ ಪರ ಹಿರಿಯ ವಕೀಲ ದೇವದತ್ತ್ ಕಾಮತ್ ಅವರು ವಾದಿಸಿದ್ದು, ತನಿಖೆಯ ಪ್ರಾಥಮಿಕ ಹಂತದಲ್ಲಿ ಎಫ್ಐಆರ್ ದಾಖಲಿಸಿದ ಇಪ್ಪತ್ತು ದಿನಗಳಲ್ಲಿ ವಿಚಾರಣೆಗೆ ತಡೆ ನೀಡಲಾಗಿದೆ. ಮತ್ತೊಂದು ಧಾರ್ಮಿಕ ಸ್ಥಳದಲ್ಲಿ ಧಾರ್ಮಿಕ ಘೋಷಣೆ ಕೂಗುವುದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ ಅಡಿಯಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಉಂಟು ಮಾಡುವ ಅಪರಾಧವಾಗುತ್ತದೆ ಎಂದು ಕೋರ್ಟ್ ನಲ್ಲಿ ವಾದಿಸಿದ್ದಾರೆ.
ಮಸೀದಿಯೊಳಗೆ ಬಂದು ಘೋಷಣೆ ಕೂಗಿದ ವ್ಯಕ್ತಿಗಳನ್ನು ಹೇಗೆ ಗುರುತಿಸಲಾಗಿದೆ? ಆರೋಪಿಗಳ ಗುರುತು ಖಾತ್ರಿಪಡಿಸಿಕೊಳ್ಳುವ ಮುನ್ನ ಸಿಸಿಟಿವಿ ಇಲ್ಲವೇ ಇನ್ಯಾವುದಾದರು ಪುರಾವೆಗಳನ್ನು ಪರಿಶೀಲಿಸಲಾಗಿದೆಯೇ ಎಂದು ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಇದೇ ವೇಳೆ ಪ್ರಶ್ನಿಸಿದೆ.