ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸ್ಥಾನವನ್ನು ಚೀನಾಕ್ಕೆ ಬಿಟ್ಟುಕೊಟ್ಟ ಜವಾಹರಲಾಲ್ ನೆಹರು: ಬಿಜೆಪಿ ಆರೋಪ
ಹೊಸದಿಲ್ಲಿ: ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ಸ್ಥಾನವನ್ನು ಚೀನಾಗೆ ಬಿಟ್ಟು ಕೊಟ್ಟಿದ್ದಾಗಿ ಬಿಜೆಪಿ ಆಪಾದಿಸಿದೆ.
ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರು ಭದ್ರತಾ ಮಂಡಳಿ ವಿಸ್ತರಣೆಗೆ ಮತ್ತು ಜಾಗತಿಕ ಸಂಸ್ಥೆಗಳ ಸುಧಾರಣೆಗೆ ಆಗ್ರಹಿಸಿದ್ದರು. ಭಾರತದ ಅಧ್ಯಕತ್ಷೆಯಲ್ಲಿ ನಡೆದ ಜಿ-20 ಶೃಂಗಸಭೆಯ ಫಲಿತಾಂಶಗಳ ಬಗ್ಗೆ ಅಮೆರಿಕ, ರಷ್ಯಾ ಹಾಗೂ ಫ್ರಾನ್ಸ್ ದೇಶಗಳು ಅತಿಥೇಯ ದೇಶವನ್ನು ಶ್ಲಾಘಿಸಿವೆ.
"ಇಂದು ಭಾರತ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ವಿಶ್ವವನ್ನು ರೂಪಿಸುತ್ತಿದ್ದು, ನೆಹರೂ ಅವರು ಚೀನಾಗೆ ಹರಿವಾಣದಲ್ಲಿಟ್ಟು ಕೊಟ್ಟ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸ್ಥಾನವನ್ನು ಭಾರತಕ್ಕೆ ಕಲ್ಪಿಸುವ ಬಗ್ಗೆ ಇಡೀ ವಿಶ್ವ ಭಾರತವನ್ನು ಬೆಂಬಲಿಸಿದೆ. ಗಾಂಧಿ ಕುಟುಂಬದ ದೇಶಪ್ರೇಮ ರಹಿತ ಕ್ರಮಗಳು ಇತಿಹಾಸದುದ್ದಕ್ಕೂ ಭಾರತವನ್ನು ಕಾಡುತ್ತಲೇ ಇವೆ" ಎಂದು ಬಿಜೆಪಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅಮೆರಿಕ, ಚೀನಾ, ಫ್ರಾನ್ಸ್, ಬ್ರಿಟನ್ ಹಾಗೂ ರಷ್ಯಾ ಹೀಗೆ ಐದು ಕಾಯಂ ಸದಸ್ಯದೇಶಗಳಿವೆ. ವಿಶ್ವವನ್ನು ಉತ್ತಮ ಭವಿಷ್ಯದತ್ತ ಒಯ್ಯುವ ನಿಟ್ಟಿನಲ್ಲಿ ಪ್ರಸ್ತುತ ವಾಸ್ತವಗಳಿಗೆ ಅನುಸಾರವಾಗಿ ಜಾಗತಿಕ ವ್ಯವಸ್ಥೆಗಳನ್ನು ಬದಲಾಯಿಸುವುದು ಅಗತ್ಯ ಎಂದು ಮೋದಿ ಪ್ರತಿಪಾದಿಸಿದ್ದರು.