ಭೂ ಹಗರಣ: ಜಾರ್ಖಂಡ್ ಸಿಎಂಗೆ ಹೊಸ ಸಮನ್ಸ್

Update: 2024-01-27 18:05 GMT

ಹೇಮಂತ್ ಸೊರೇನ್ (PTI)

ರಾಂಚಿ : ಭೂಹಗರಣ ಆರೋಪದ ಪ್ರಕರಣಲ್ಲಿ ವಿಚಾರಣೆಗೆ ಹಾಜರಾಗಲು ಸಮಯ ಹಾಗೂ ಸ್ಥಳ ನಿರ್ಧರಿಸುವಂತೆ ಸೂಚಿಸಿ ಜಾರಿ ನಿರ್ದೇಶನಾಲಯ (ಈಡಿ) ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಮತ್ತೊಂದು ಪತ್ರ ರವಾನಿಸಿದೆ. 9ನೇ ಸಮನ್ಸ್‌ನ ಬಳಿಕ ಸೊರೇನ್, ಮಾರ್ಚ್ 31ರ ಮುನ್ನ ಪೂರ್ವ ನಿರ್ಧರಿತ ಕಾರ್ಯಕ್ರಮಗಳು ಇರುವುದರಿಂದ ದಿನಾಂಕ ನೀಡಲು ಸಾಧ್ಯವಾಗುವುದಿಲ್ಲ ಎಂದು ಪ್ರತಿಪಾದಿಸಿ ಪತ್ರ ಬರೆದಿದ್ದಾರೆ.

ಜನವರಿ 29 ಹಾಗೂ 31ರ ನಡುವೆ ಸಮಯ ಹಾಗೂ ಸ್ಥಳ ಆಯ್ಕೆ ಮಾಡುವಂತೆ ಸೂಚಿಸಿ ಈಡಿ ಸೊರೇನ್ ಅವರಿಗೆ ಪತ್ರ ರವಾನಿಸಿದೆ. ಒಂದು ವೇಳೆ ಸೊರೇನ್ ಅವರು ನಿರ್ಧಾರ ತೆಗೆದುಕೊಳ್ಳದೇ ಇದ್ದರೆ, ಈಡಿ ಅಧಿಕಾರಿಗಳು ಅವರಿದ್ದಲ್ಲಿಗೆ ತೆರಳಲಿದ್ದಾರೆ.

ಭೂಹಗರಣದ ಪ್ರಕರಣದಲ್ಲಿ ಈಡಿ ಎಂಟನೇ ಬಾರಿ ಸಮನ್ಸ್ ನೀಡಿದ ಬಳಿಕ ಸೊರೇನ್ ಅವರು ವಿಚಾರಣೆಯಲ್ಲಿ ಪಾಲ್ಗೊಳ್ಳಲು ಒಪ್ಪಿಕೊಂಡಿದ್ದರು. ಜನವರಿ 20ರಂದು ರಾಂಚಿಯ ಅವರ ನಿವಾಸದಲ್ಲಿ ಈಡಿ 7 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿತ್ತು. ಈಗ ಈಡಿ ಅವರನ್ನು ಮತ್ತೊಮ್ಮೆ ಪ್ರಶ್ನಿಸಲು ಬಯಸಿದೆ.

ಭೂಹಗರಣದ ಪ್ರಕರಣದಲ್ಲಿ ಪ್ರಧಾನ ಆರೋಪಿಗಳಲ್ಲಿ ಓರ್ವನಾದ ಬಾನು ಪ್ರತಾಪ್ ಮನೆಯಲ್ಲಿ ಪತ್ತೆಯಾದ ದಾಖಲೆಗಳ ಆಧಾರದಲ್ಲಿ ಜಾರಿ ನಿರ್ದೇಶನಾಲಯ ರಾಂಚಿ ಭೂಹಗರಣದ ತನಿಖೆ ನಡೆಸುತ್ತಿದೆ. ಜಾರಿ ನಿರ್ದೇಶನಾಲಯದ ಪ್ರಕಾರ ದಾಳಿ ವೇಳೆ ಭೂಮಿಗೆ ಸಂಬಂಧಿಸಿದ ಹಲವು ಪ್ರಮುಖ ದಾಖಲೆಗಳು ಬಡಾಗೈನ್ ವಲಯದ ಸಬ್ ಇನ್ಸ್‌ಪೆಕ್ಟಕರ್ ಬಾನು ಪ್ರತಾಪ್ ಪ್ರಸಾದ್ ಅವರ ನಿವಾಸದಲ್ಲಿ ಪತ್ತೆಯಾಗಿತ್ತು. ಅದರಲ್ಲಿ ಕೆಲವು ನಿರ್ದಿಷ್ಟ ದಾಖಲೆಗಳು ರಾಂಚಿಯಲ್ಲಿ ಬುಡಕಟ್ಟು ಜನರ ಬೆಲೆಬಾಳುವ ಭೂಮಿ ಸ್ವಾಧೀನದಲ್ಲಿ ಮುಖ್ಯಮಂತ್ರಿಗೆ ನಂಟು ಹೊಂದಿರುವುದಕ್ಕೆ ಪುರಾವೆ ಒದಗಿಸಿದೆ ಎಂದು ಹೇಳಲಾಗಿದೆ. ಸೊರೇನ್ ಅವರಿಗೆ ಜಾರಿ ನಿರ್ದೇಶನಾಲಯ ಮೊದಲ ಬಾರಿಗೆ ಆಗಸ್ಟ್ 14ರಂದು ಸಮನ್ಸ್ ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News