ಜೆಎಂಎಂ ಶಾಸಕ ದಿಢೀರ್ ರಾಜೀನಾಮೆ: ಸೊರೇನ್ ಪತ್ನಿಗೆ ಸಿಎಂ ಪಟ್ಟ?
ರಾಂಚಿ: ಮೂರು ಬಾರಿಯ ಜೆಎಂಎಂ ಶಾಸಕ ಜಾರ್ಖಂಡ್ ವಿಧಾನಸಭೆಗೆ ದಿಢೀರ್ ರಾಜೀನಾಮೆ ನೀಡಿರುವುದು ಜಾರ್ಖಂಡ್ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ರಾಂಚಿ ಭೂಹಗರಣ ಪ್ರಕರಣದಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು, ಕಾನೂನು ಜಾರಿ ನಿರ್ದೇಶನಾಲಯ ನೀಡಿರುವ ಏಳನೇ ಸಮನ್ಸ್ ಕೂಡಾ ನಿರ್ಲಕ್ಷಿಸಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಶಾಸಕನ ರಾಜೀನಾಮೆಯಿಂದ ತೆರವಾಗಿರುವ ಗ್ಯಾಂಡೆ ಕ್ಷೇತ್ರದ ಮೂಲಕ ಸೊರೇನ್ ಪತ್ನಿ ಕಲ್ಪನಾ ಅವರನ್ನು ಸಿಎಂ ಗಾದಿಗೆ ಏರಿಸುವ ಲೆಕ್ಕಾಚಾರ ಇದಾಗಿದೆ ಎಂದು ಬಿಜೆಪಿ ಅಂದಾಜಿಸಿದೆ.
ಯಾವುದೇ ಕಾರಣ ನೀಡದೇ ಸರ್ಫರಾಜ್ ಅಹ್ಮದ್ (64) ದಿಢೀರನೇ ರಾಜೀನಾಮೆ ನೀಡಿದ್ದು, ಸ್ಪೀಕರ್ ರಬೀಂದ್ರನಾಥ್ ಮಹತೊ ರಾಜೀನಾಮೆಯನ್ನು ಆಂಗೀಕರಿಸಿದ್ದಾರೆ. "ಅಹ್ಮದ್ ಅವರ ಹಿರಿತನದ ಹಿನ್ನೆಲೆಯಲ್ಲಿ ಅವರ ರಾಜೀನಾಮೆಗೆ ವಿವರಣೆ ಕೇಳುವುದು ಸೂಕ್ತವಲ್ಲ ಎಂಬ ಭಾವನೆ ನನ್ನದು" ಎಂದು ಸ್ಪೀಕರ್ ಹೇಳಿದ್ದಾರೆ.
ಡಿಸೆಂಬರ್ 31ರಿಂದ ಅನ್ವಯವಾಗುವಂತೆ ಗ್ಯಾಂಡಿ ಕ್ಷೇತ್ರ ತೆರವಾಗಿದೆ ಎಂದು ವಿಧಾನಸಭಾ ಸೆಕ್ರೆಟ್ರಿಯೇಟ್ ಪ್ರಕಟಿಸಿದೆ.
ಈ ದಿಢೀರ್ ರಾಜಕೀಯ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದರುವ ಬಿಜೆಪಿಯ ಗೊಡ್ಡಾ ಸಂಸದ ನಿಶಿಕಾಂತ್ ದುಬೆ ಎಕ್ಸ್ ಪೋಸ್ಟ್ ನಲ್ಲಿ, "ಜೆಎಂಎಂ ಶಾಸಕನ ರಾಜೀನಾಮೆ ಅಧಿಕಾರದ ಬಲವಂತದ ಬದಲಾವಣೆಗೆ ಸಿದ್ಧತೆ. ಸಿಎಂ ಹೇಮಂತ್ ಸೊರೇನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದಾಗ, ಅವರ ಪತ್ನಿ ಕಲ್ಪನಾ ಮುಂದಿನ ಸಿಎಂ ಆಗಲಿದ್ದಾರೆ. ಸೊರೇನ್ ಕುಟುಂಬಕ್ಕೆ ಹೊಸ ವರ್ಷ ಯಾತನಾಮಯವಾಗಲಿದೆ" ಎಂದು ಹೇಳಿದ್ದಾರೆ.
ಗ್ಯಾಂಡಿ ಶಾಸಕರ ನಿರ್ಗಮನಕ್ಕೆ ಕಾರಣ ಪಕ್ಷಕ್ಕೆ ತಿಳಿದಿಲ್ಲ. ಈ ಕುರಿತ ಪ್ರಶ್ನೆಗಳಿಗೆ ಅಹ್ಮದ್ ಅವರೇ ಉತ್ತರಿಸಬೇಕು ಎಂದು ಜೆಎಂಎಂ ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರ ವಿನೋದ್ ಕುಮಾರ್ ಪಾಂಡೆ ಅಭಿಪ್ರಾಯಪಟ್ಟಿದ್ದಾರೆ.