ಕಾಂವಡ ಯಾತ್ರೆ: ಮುಝಫ್ಫರ್‌ನಗರ ದಲ್ಲಿ ಮಾಂಸದಂಗಡಿಗಳನ್ನು ಮುಚ್ಚಿಸಿದ ಜಿಲ್ಲಾಡಳಿತ ಆಡಳಿತ
ಲಕ್ನೋ: ಕಾಂವಡ ಯಾತ್ರೆಯ ಸಂದರ್ಭದಲ್ಲಿ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡದಿರಲು ಉತ್ತರ ಪ್ರದೇಶದ ಮುಝಫ್ಫರ್‌ನಗರದಲ್ಲಿಯ ಮಾಂಸದ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಮುಚ್ಚುವಂತಾಗಿತ್ತು. ವು ಈ ಅಂಗಡಿಗಳಿಗೆ ಕಪ್ಪು ಬಟ್ಟೆಗಳನ್ನು ಹೊಂದಿಸಿತ್ತು ಎಂದೂ ವರದಿಯಾಗಿದೆ.
ಆರಂಭದಲ್ಲಿ 114 ಮುಸ್ಲಿಮರನ್ನು ‘ಶಾಂತಿ ಮಾತುಕತೆ ’ಗಳಿಗಾಗಿ ಕರೆಸಿದ್ದ ಪೊಲೀಸರು ನಂತರ ಅವರನ್ನು ಬಂಧಿಸಿ ಜೈಲಿಗೂ ಕಳುಹಿಸಿದ್ದರು. ‘ನಮ್ಮನ್ನು ಪೊಲೀಸ್ ಠಾಣೆಯಲ್ಲಿ ಬಂಧಿಸಿ ಒಂದು ದಿನದ ಮಟ್ಟಿಗೆ ಜೈಲಿಗೆ ತಳ್ಳಲಾಗಿತ್ತು. ಜೈಲಿಗೆ ತಳ್ಳಲು ನಾವು ಯಾವ ಅಪರಾಧವನ್ನು ಮಾಡಿದ್ದೇವೆ ಎಂದು ಪೊಲೀಸ್ ಅಧಿಕಾರಿಯನ್ನು ಕೇಳಿದಾಗ ನಮ್ಮ ಹಿನ್ನೆಲೆ ಕೆಟ್ಟದಾಗಿದೆ ಎಂದು ಅವರು ತಿಳಿಸಿದ್ದರು.
ಕೇವಲ ನಗರದ ಶಾಂತಿಯನ್ನು ಕದಡುವ ಅಪರಾಧವನ್ನು ನಾವು ಮಾಡಬಹುದೆಂಬ ಶಂಕೆಯಿಂದ ನಮ್ಮನ್ನು ಜೈಲಿಗೆ ತಳ್ಳಲಾಗಿತ್ತು ’ಎಂದು ಮುಸ್ಲಿಮ್ ಯುವಕನೋರ್ವ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ‘ಸಮುದಾಯಗಳ ನಡುವೆ ಶಾಂತಿ’ಯನ್ನು ಕಾಯ್ದುಕೊಳ್ಳಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು ಎಂದು ಅಧಿಕಾರಿಗಳು ಹೇಳಿದರೆ,ಇದು ನಮ್ಮ ‘ಜೀವನೋಪಾಯದ ಮೇಲೆ ದಾಳಿ ’ಎಂದು ಮಾಂಸ ವ್ಯಾಪಾರಿಗಳು ಬಣ್ಣಿಸಿದ್ದಾರೆ.
ಭಕ್ತರ ನಂಬಿಕೆಯನ್ನು ಗೌರವಿಸಿ ಕಾಂವಡ ಯಾತ್ರೆಯ ಮಾರ್ಗದಲ್ಲಿ ಮಾಂಸ ಮಾರಾಟಕ್ಕೆ ಅವಕಾಶವನ್ನು ನೀಡಬಾರದು. ಮಾರ್ಗವು ಸ್ವಚ್ಛವಾಗಿರಬೇಕು. ಬೀದಿದೀಪಗಳು ಮತ್ತು ಕುಡಿಯುವ ನೀರಿನ ವ್ಯವಸ್ಥೆಗಳನ್ನು ಮಾಡಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹಿರಿಯ ಅಧಿಕಾರಿಗಳ ಸಭೆಯಲ್ಲಿ ತಿಳಿಸಿದ್ದರು.
ಜು.4ರಿಂದ ಆರಂಭಗೊಂಡಿರುವ ಕಾಂವಡ ಯಾತ್ರೆಯು ಜು.15ರಂದು ಅಂತ್ಯಗೊಳ್ಳಲಿದೆ.