ಪಾಕಿಸ್ತಾನ ʼಕದ್ದ ಭೂಭಾಗʼ ಮರಳಿಸಿದರೆ ಕಾಶ್ಮೀರ ಸಮಸ್ಯೆ ಬಹುತೇಕ ಇತ್ಯರ್ಥ: ಜೈಶಂಕರ್ ‌

Update: 2025-03-06 07:45 IST
ಪಾಕಿಸ್ತಾನ ʼಕದ್ದ ಭೂಭಾಗʼ ಮರಳಿಸಿದರೆ ಕಾಶ್ಮೀರ ಸಮಸ್ಯೆ ಬಹುತೇಕ ಇತ್ಯರ್ಥ: ಜೈಶಂಕರ್ ‌

PC: x.com/DrSJaishankar

  • whatsapp icon

ಲಂಡನ್: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿರುವುದು, ಆರ್ಥಿಕ ಕ್ರಮಗಳ ಮತ್ತು ಅಧಿಕ ಪ್ರಮಾಣದ ಮತದಾನದೊಂದಿಗೆ ಚುನಾವಣೆಗಳನ್ನು ನಡೆಸಿರುವುದು ಸೇರಿದಂತೆ ಕಾಶ್ಮೀರ ವಿಚಾರದಲ್ಲಿ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಪ್ರತಿಪಾದಿಸಿದರು.

ಇಲ್ಲಿನ ಚಾಥಮ್ ಹೌಸ್ ಚಿಂತನ ಮಂಥನ ಗೋಷ್ಠಿಯಲ್ಲಿ "ಭಾರತದ ಉದಯ ಮತ್ತು ವಿಶ್ವದಲ್ಲಿ ಭಾರತದ ಪಾತ್ರ" ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಆರ್ಥಿಕತೆಯಲ್ಲಿ ಡಾಲರ್ ಬಳಸುವ ಬಗೆಗಿನ ಬ್ರಿಕ್ಸ್ ದೇಶಗಳ ಅಭಿಪ್ರಾಯದ ಬಗ್ಗೆಯೂ ಚರ್ಚಿಸಿದರು.

ಕಾಶ್ಮೀರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್, "ಕಾಶ್ಮೀರದಲ್ಲಿ ನಾವು ಅತ್ಯುತ್ತಮ ಕಾರ್ಯಗಳನ್ನು ಮಾಡುತ್ತಿದ್ದೇವೆ ಹಾಗೂ ಸಮಸ್ಯೆ ಬಹುತೇಕ ಬಗೆಹರಿದಿದೆ. ಸಂವಿಧಾನದ 370ನೇ ವಿಧಿ ರದ್ದುಪಡಿಸಿರುವುದು ಒಂದು ಹೆಜ್ಜೆ. ಪ್ರಗತಿ, ಆರ್ಥಿಕ ಚಟುವಟಿಕೆಗಳು ಮತ್ತು ಸಾಮಾಜಿಕ ನ್ಯಾಯ ಪುನಸ್ಥಾಪನೆ ಎರಡನೇ ಹೆಜ್ಜೆ. ಅತ್ಯಧಿಕ ಪ್ರಮಾಣದ ಮತದಾನದೊಂದಿಗೆ ಚುನಾವಣೆ ನಡೆಸಿರುವುದು ಮೂರನೇ ಕ್ರಮ. ಇದೀಗ ಪಾಕಿಸ್ತಾನ ಅಕ್ರಮವಾಗಿ ವಶಪಡಿಸಿಕೊಂಡಿರುವ ಕಾಶ್ಮೀರದ ಕದ್ದ ಭಾಗವನ್ನು ವಾಪಾಸು ಮಾಡುವುದನ್ನು ನಾವು ಕಾಯುತ್ತಿದ್ದೇವೆ. ಅದು ಸಾಧ್ಯವಾದಾಗ, ಕಾಶ್ಮೀರ ಸಮಸ್ಯೆ ಬಗೆಹರಿಯುತ್ತದೆ ಎಂಬ ಭರವಸೆ ನೀಡಬಲ್ಲೆ" ಎಂದು ವಿವರಿಸಿದರು.

ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತ ವ್ಯವಸ್ಥೆ ಬಹುಧ್ರುವ ಸಿದ್ಧಾಂತದತ್ತ ಮುನ್ನಡೆಯುತ್ತಿದ್ದು, ಇದು ಭಾರತದ ಹಿತಾಸಕ್ತಿಗೆ ಪೂರಕವಾಗಿದೆ. ಉಭಯ ದೇಶಗಳು ದ್ವಿಪಕ್ಷೀಯ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುವ ಅಗತ್ಯತೆಯನ್ನು ಒಪ್ಪಿಕೊಂಡಿವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News