ಕೇರಳ | ಜಾಮೀನಿನಲ್ಲಿ ಹೊರಬಂದು ಇಬ್ಬರನ್ನು ಕೊಂದ ಕೊಲೆ ಆರೋಪಿ
![ಕೇರಳ | ಜಾಮೀನಿನಲ್ಲಿ ಹೊರಬಂದು ಇಬ್ಬರನ್ನು ಕೊಂದ ಕೊಲೆ ಆರೋಪಿ ಕೇರಳ | ಜಾಮೀನಿನಲ್ಲಿ ಹೊರಬಂದು ಇಬ್ಬರನ್ನು ಕೊಂದ ಕೊಲೆ ಆರೋಪಿ](https://www.varthabharati.in/h-upload/2025/01/29/1500x900_1318810-gdfdf.webp)
ಬಂಧಿತ ಚೆಂತಾಮರ (Photo: thesouthfirst.com)
ಪಾಲಕ್ಕಾಡ್ : ಕೇರಳದ ಪಾಲಕ್ಕಾಡ್ ಜಿಲ್ಲೆಯ ನೆನ್ಮಾರಾ ಪಟ್ಟಣದಲ್ಲಿ ಮಹಿಳೆಯೋರ್ವರನ್ನು ಕೊಲೆ ಮಾಡಿ ಜೈಲು ಸೇರಿದ್ದ ಆರೋಪಿ ಜಾಮೀನಿನಲ್ಲಿ ಜೈಲಿನಿಂದ ಹೊರಬಂದು ಅವಳಿ ಕೊಲೆ ಮಾಡಿರುವ ಘಟನೆ ನಡೆದಿದೆ. ಈ ಆತಂಕಕಾರಿ ಘಟನೆಯು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಘಟನೆಯನ್ನು ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
ನೆನ್ಮಾರಾ ಪಟ್ಟಣದಲ್ಲಿ ಸುಧಾಕರನ್ (55) ಮತ್ತು ಅವರ ತಾಯಿ ಲಕ್ಷ್ಮಿ (75) ಅವರನ್ನು ಸೋಮವಾರ ಅವರ ಮನೆಯಲ್ಲಿ ಚೂರಿಯಿಂದ ಇರಿದು ಕೊಲೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಚೆಂತಾಮರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಚೆಂತಾಮರ ಐದು ವರ್ಷಗಳ ಹಿಂದೆ ಸುಧಾಕರನ್ ಪತ್ನಿ ಸಜಿತಾ ಅವರನ್ನು ಕೊಲೆ ಮಾಡಿ ಜೈಲು ಸೇರಿದ್ದ ಎನ್ನಲಾಗಿದೆ.
2019ರಲ್ಲಿ ಸಜಿತಾ ಕೊಲೆ ನಡೆದಿತ್ತು. ಆ ಬಳಿಕ ಜೈಲು ಸೇರಿದ್ದ ಚೆಂತಾಮರ 2025ರಲ್ಲಿ ಜಾಮೀನಿನಲ್ಲಿ ಹೊರಬಂದು ಸುಧಾಕರನ್ ಮತ್ತು ಅವರ ತಾಯಿ ಲಕ್ಷ್ಮೀ ಅವರ ಕೊಲೆ ಮಾಡಿದ್ದಾನೆ. ಚೆಂತಾಮರ ಕ್ಷುಲ್ಲಕ ಕಾರಣಕ್ಕೆ ನಡೆಸಿದ ಈ ತ್ರಿವಳಿ ಕೊಲೆಯಿಂದ ಸುಧಾಕರನ್ ಮತ್ತು ಸಜಿತಾ ದಂಪತಿಯ ಅಖಿಲಾ ಮತ್ತು ಅತುಲ್ಯ ಎಂಬ ಇಬ್ಬರು ಮಕ್ಕಳು ಈಗ ಅನಾಥರಾಗಿದ್ದಾರೆ.
ಸಜಿತಾಳನ್ನು ಕೊಲೆ ಮಾಡಿ ಜೈಲು ಸೇರಿದ್ದ ಸುಧಾಕರನ್ ಜಾಮೀನು ಪಡೆದು ನೆನ್ಮಾರಾದಲ್ಲಿ ವಾಸಿಸುತ್ತಿದ್ದ. ಆತನನ್ನು ಗ್ರಾಮದಿಂದ ಗಡಿಪಾರು ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದರು. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎನ್ನಲಾಗಿದೆ.
"ಅವನು 2019ರಲ್ಲಿ ನಮ್ಮ ತಾಯಿಯನ್ನು ಕೊಲೆ ಮಾಡಿ ಜೈಲು ಸೇರಿದ್ದ. ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಬಂದು ನಮ್ಮ ತಂದೆ ಮತ್ತು ಅಜ್ಜಿಯನ್ನು ಕೊಲೆ ಮಾಡಿದ್ದಾನೆ. ಈಗ ಆತನನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಕೆಲ ದಿನಗಳ ನಂತರ ಅವನು ಮತ್ತೆ ಬಿಡುಗಡೆಯಾಗಬಹುದು. ಅವನು ಮತ್ತೆ ಕೊಲೆ ಮಾಡುತ್ತಾನೆ. ಅವನು ನಮ್ಮ ತಂದೆಯನ್ನು ಕೊಲೆ ಮಾಡಲು ಕಾರಣವೇನು?ʼ ಎಂದು ಅನಾಥರಾದ ಅಖಿಲಾ ಮತ್ತು ಅತುಲ್ಯ ಪ್ರಶ್ನಿಸಿದ್ದಾರೆ.
ಸೇಡು ತೀರಿಸಿಕೊಳ್ಳುವ ಭಯದಿಂದ ಅವಳಿ ಕೊಲೆ!
ಪೊಲೀಸರ ಪ್ರಕಾರ, ಚೆಂತಾಮಾರ ಅವಳಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಈ ಹಿಂದೆ ತಾನು ಸುಧಾಕರನ್ ಪತ್ನಿ ಸಜಿತಾಳನ್ನು ಕೊಲೆ ಮಾಡಿದ್ದರಿಂದ, ಅದರ ಸೇಡು ತೀರಿಸಿಕೊಳ್ಳಲು ಸುಧಾಕರನ್ ತನ್ನ ಮೇಲೆ ಹಲ್ಲೆ ನಡೆಸಬಹುದೆಂದು ಭಯದಿಂದ, ಸುಧಾಕರನ್ ಮತ್ತು ಆತನ ತಾಯಿ ಲಕ್ಷ್ಮಿಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಚೆಂತಾಮಾರನ ಪತ್ನಿ ಆತನನ್ನು ಬಿಟ್ಟು ಹೋಗಿದ್ದಳು. ಸುಧಾಕರನ್ ಕುಟುಂಬ ವಾಮಾಚಾರ ಮಾಡಿರಬಹುದು, ಆ ಕಾರಣಕ್ಕೆ ನನ್ನ ಪತ್ನಿ ನನ್ನನ್ನು ತೊರೆದಿದ್ದಾಳೆ ಎಂದು ಚೆಂತಾಮಾರ ಶಂಕಿಸಿದ್ದ. ಇದೇ ದ್ವೇಷದಿಂದ ಚೆಂತಾಮಾರನು 2019ರಲ್ಲಿ ಸಜಿತಾಳನ್ನು ಕೊಲೆ ಮಾಡಿದ್ದ.
“ಸುಧಾಕರನ್ ಕುಟುಂಬ ವಾಮಾಚಾರ ಮಾಡಿದ್ದರಿಂದ ನನ್ನ ಪತ್ನಿ ನನ್ನನ್ನು ತೊರೆದಿದ್ದಾಳೆ ಎಂದು ಚೆಂತಾಮಾರ ಶಂಕಿಸಿದ್ದ. 2019ರಲ್ಲಿ ಇದೇ ಕಾರಣಕ್ಕೆ ಸಜಿತಾಳನ್ನು ಕೊಲೆ ಮಾಡಿದ್ದ. ಸುಜಿತಾ ಕೊಲೆಯಾದ ನಂತರ ಸುಧಾಕರನ್ ಮತ್ತೆ ವಿವಾಹವಾಗಿದ್ದ. ಚೆಂತಾಮರ ಅವಳಿ ಕೊಲೆ ಕೃತ್ಯವನ್ನು ಎಸಗುವಾಗ ಸುಧಾಕರನ್ ಎರಡನೇ ಪತ್ನಿ ಮತ್ತು ಮಕ್ಕಳು ಮನೆಯಲ್ಲಿಲ್ಲದ ಕಾರಣ ಅವರು ಬದುಕುಳಿದಿದ್ದಾರೆ. ಅವಳಿ ಕೊಲೆ ಬಳಿಕ ಚೆಂತಾಮರ ಅರಣ್ಯ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ. ಆತನನ್ನು ಬಂಧಿಸಲು ಪೊಲೀಸರು 36 ಗಂಟೆಗಳಿಗೂ ಹೆಚ್ಚು ಕಾಲ ಅರಣ್ಯದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಆತ ಅರಣ್ಯ ಪ್ರದೇಶವನ್ನು ಚೆನ್ನಾಗಿ ತಿಳಿದಿದ್ದರಿಂದ ಬಂಧಿಸಲು ತೆರಳಿದ ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಕೊನೆಗೆ ಪೊಲೀಸರು ಅರಣ್ಯದಲ್ಲಿ ಕಾರ್ಯಾಚರಣೆ ನಿಲ್ಲಿಸುವುದಾಗಿ ಘೋಷಿಸಿದ್ದರು. ಇದರಿಂದಾಗಿ ಆತ ಆಹಾರ ಸಾಮಾಗ್ರಿಗಳನ್ನು ಸಂಗ್ರಹಿಸಲು ಮನೆಗೆ ಬಂದಿದ್ದ. ಈ ವೇಳೆ ಪೊಲೀಸರ ಕೈಗೆ ಆತ ಸಿಕ್ಕಿಬಿದ್ದಿದ್ದಾನೆ. ಚೆಂತಾಮರನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ಅಜಿತ್ ಕುಮಾರ್ ಹೇಳಿದ್ದಾರೆ.