ಲೋಕಸಭಾ ಚುನಾವಣೆ: ಡಿಎಂಕೆ ಜತೆ ಕಮಲ್ ಹಾಸನ್ ಮೈತ್ರಿ ನಿರೀಕ್ಷೆ
ಚೆನ್ನೈ: ಲೋಕಸಭಾ ಚುನಾವಣೆ ಕೆಲವೇ ತಿಂಗಳಷ್ಟು ದೂರ ಇರುವ ಹಿನ್ನೆಲೆಯಲ್ಲಿ ತಮಿಳುನಾಡಿನ ರಾಜಕೀಯ ಪಕ್ಷಗಳು, ಮೈತ್ರಿಕೂಟಗಳನ್ನು ಬೆಸೆಯುವ ಪ್ರಕ್ರಿಯೆ ಆರಂಭಿಸಿದ್ದು, ಮಾತುಕತೆ ನಡೆಸುತ್ತಿವೆ. ಡಿಎಂಕೆ ಸೀಟು ಹಂಚಿಕೆ ಮಾತುಕತೆ ಪ್ರಕ್ರಿಯೆಯನ್ನು ಆರಂಭಿಸಿದ್ದು, ಹೊಸ ಮಿತ್ರಪಕ್ಷವನ್ನಾಗಿ ಕಮಲ್ ಹಾಸನ್ ನೇತೃತ್ವದ ಮಕ್ಕಳ್ ನೀತಿ ಮಿಯಾಮ್ (ಎಂಎನ್ಎಂ) ಪಕ್ಷವನ್ನು ಸೇರಿಸಿಕೊಳ್ಳುವ ನಿರೀಕ್ಷೆ ಇದೆ.
ಡಿಎಂಕೆ ನೇತೃತ್ವದ, ಕಾಂಗ್ರೆಸ್ ಪಕ್ಷವನ್ನು ಒಳಗೊಂಡ ಮೈತ್ರಿಕೂಟದ ಜತೆಗಿನ ಒಲವನ್ನು ಹಲವು ತಿಂಗಳ ಹಿಂದೆ ವ್ಯಕ್ತಪಡಿಸಿದ್ದ ಕಮಲ್ ಹಾಸನ್, ಡಿಎಂಕೆ ಮುಖಂಡ ಎಂ.ಕೆ.ಸ್ಟಾಲಿನ್ ಅವರನ್ನು ಭೇಟಿ ಮಾಡಿದ ಬಳಿಕ ಲೋಕಸಭೆಗೆ ಸ್ಪರ್ಧಿಸುವ ಸಂಬಂಧ ಮಾತುಕತೆ ಆರಂಭಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಸೋಮವಾರ ಆರಂಭವಾಗುವ ರಾಜ್ಯ ವಿಧಾನಸಭೆಯ ಬಜೆಟ್ ನ ಸಂಕ್ಷಿಪ್ತ ಅಧಿವೇಶನದ ಬಳಿಕ ಉಭಯ ಮುಖಂಡರು ಮಾತುಕತೆ ನಡೆಸಲಿದ್ದಾರೆ ಎಂದು ಉನ್ನತ ಮೂಲಗಳು ದೃಢಪಡಿಸಿವೆ. ಎಂಎನ್ಎಂಗೆ ಒಂದು ಸ್ಥಾನವನ್ನು ನೀಡುವ ನಿರೀಕೆ ಇದೆ ಎಂದು ಮೂಲಗಳು ಹೇಳಿವೆ. ಟಾರ್ಚ್ ಲೈಟ್ ಚಿಹ್ನೆಯಡಿ ಎಂಎನ್ಎಂ ಮುಖಂಡ ಕಮಲ್ ಹಾಸನ್ ಸ್ವತಃ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.
ಮೈತ್ರಿಕೂಟದ ಬಹುತೇಕ ಎಲ್ಲ ಪಾಲುದಾರ ಪಕ್ಷಗಳ ಜತೆ ಡಿಎಂಕೆ ಈಗಾಗಲೇ ಒಂದು ಸುತ್ತು ಮಾತುಕತೆ ನಡೆಸಿದೆ. ಯಾವುದೇ ಪಕ್ಷ ಮೈತ್ರಿಕೂಟಕ್ಕೆ ಸೇರುವುದಾದಲ್ಲಿ, ಈಗ ಮಾತುಕತೆ ನಡೆಸಲಾಗುತ್ತದೆ ಎಂದು ಡಿಎಂಕೆ ಮೂಲಗಳು ತಿಳಿಸಿವೆ.
ರಾಹುಲ್ ಗಾಂಧಿ ಅವರು 2022ರಲ್ಲಿ ಭಾರತ್ ಜೋಡೊ ಯಾತ್ರೆ ಆರಂಭಿಸಿದ ವೇಳೆ ಕಮಲ್ ಹಾಸನ್ ಅವರು ಇದರಲ್ಲಿ ಪಾಲ್ಗೊಂಡು ರಾಜಕೀಯ ಸಂಬಂಧ ಬೆಳೆಸಿಕೊಂಡಿದ್ದರು. ಜತೆಗೆ ಕಾಂಗ್ರೆಸ್ ಮುಖಂಡನ ಜತೆ ನೇರ ಮಾತುಕತೆಯನ್ನೂ ನಡೆಸಿದ್ದರು.
ಈ ಬಗ್ಗೆ ತಮಿಳುನಾಡು ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷ ಕೆ.ಸೆಲ್ವಪೆರುಂತಗಾಯ್ ಅವರು, ಕಮಲ್ ಹಾಸನ್ ಅವರಿಗೆ ತಮ್ಮ ಕೋಟಾದಿಂದ ಒಂದು ಸ್ಥಾನವನ್ನು ಬಿಟ್ಟುಕೊಡಲು ತಮ್ಮ ಸಮ್ಮತಿ ಇದೆ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.