ಕೋವಿಡ್ ಬಳಿಕ ಭಾರತೀಯರಲ್ಲಿ ಶ್ವಾಸಕೋಶದ ಧೀರ್ಘಾವಧಿ ಹಾನಿ ಅಧಿಕ

Update: 2024-02-19 05:41 GMT

Photo: feepik

ಮುಂಬೈ: ಕೋವಿಡ್-19 ಸೋಂಕಿನಿಂದ ಚೇತರಿಸಿಕೊಂಡ ಬಹಳಷ್ಟು ಮಂದಿ ಭಾರತೀಯರಲ್ಲಿ ಶ್ವಾಸಕೋಶದ ದುರ್ಬಲತೆ ಹಾಗೂ ಇದಕ್ಕೆ ಸಂಬಂಧಿಸಿದ ರೋಗಲಕ್ಷಣಗಳು ಸುಧೀರ್ಘ ಅವಧಿಗೆ ಉಳಿದುಕೊಂಡಿವೆ ಎಂಬ ಅಂಶವನ್ನು ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು ನಡೆಸಿದ ಅಧ್ಯಯನ ವರದಿ ಬಹಿರಂಗೊಳಿಸಿದೆ.

ಯೂರೋಪಿಯನ್ನರು ಮತ್ತು ಚೀನಿಯರಿಗೆ ಹೋಲಿಸಿದರೆ ಭಾರತೀಯರಲ್ಲಿ ಶ್ವಾಸಕೋಶಕ್ಕೆ ಹಾನಿಯಾಗಿರುವ ಪ್ರಕರಣಗಳು ಅಧಿಕ ಎಂದು ವರದಿಯಲ್ಲಿ ಹೇಳಲಾಗಿದೆ. ಕೆಲವರಲ್ಲಿ ಒಟ್ಟಾರೆಯಾಗಿ ಶ್ವಾಸಕೋಶ ಸಮರ್ಪಕ ಕಾರ್ಯನಿರ್ವಹಣೆ ಸಹಜ ಸ್ಥಿತಿಗೆ ಬರಲು ಒಂದು ವರ್ಷ ತೆಗೆದುಕೊಂಡಿದ್ದರೆ, ಇತರ ಕೆಲವರಲ್ಲಿ ಜೀವನ ಪರ್ಯಂತ ಈ ಸಮಸ್ಯೆ ಉಳಿದುಕೊಂಡಿದೆ ಎಂದು ವರದಿ ವಿವರಿಸಿದೆ.

ಈ ವರದಿಯನ್ನು ಶ್ವಾಸಕೋಶ ಕಾರ್ಯನಿರ್ವಹಣೆ ಮೇಲೆ ಸಾರ್ಸ್-ಕೋವ್-2 ಪರಿಣಾಮ ಕುರಿತ ದೇಶದ ಅತಿದೊಡ್ಡ ಸಂಶೋಧನಾತ್ಮಕ ವರದಿ ಎಂದು ಪರಿಗಣಿಸಲಾಗಿದ್ದು, 207 ಮಂದಿಯನ್ನು ತಪಾಸಣೆ ನಡೆಸಲಾಗಿದೆ. ಕೋವಿಡ್ ಸಾಂಕ್ರಾಮಿಕದ ಮೊದಲ ಅಲೆಯ ವೇಳೆ ನಡೆಸಿದ ಈ ಅಧ್ಯಯನದ ವರದಿಯನ್ನು ಇತ್ತೀಚೆಗೆ ಪ್ಲೋಸ್ ಗ್ಲೋಬಲ್ ಪಬ್ಲಿಕ್ ಜರ್ನಲ್ ಪ್ರಕಟಿಸಿದೆ.

ಕೋವಿಡ್ ನಿಂದ ಚೇತರಿಸಿಕೊಂಡು ಎರಡು ತಿಂಗಳು ಕಳೆದ ಬಳಿಕ ನಡೆದ ಶ್ವಾಸಕೋಶ ಪರೀಕ್ಷೆಯಲ್ಲಿ, ಆರು ನಿಮಿಷದ ನಡಿಗೆ, ರಕ್ತ ಪರೀಕ್ಷೆಗಳು ಮತ್ತು ಜೀವನ ಗುಣಮಟ್ಟ ಮೌಲ್ಯಮಾಪನವನ್ನು ಈ ರೋಗಿಗಳಿಗೆ ನಡೆಸಲಾಗಿತ್ತು. ಮಂದ, ಸಾಮಾನ್ಯ ಮತ್ತು ತೀವ್ರ ಕೋವಿಡ್ ಸೋಂಕಿಗೆ ಒಳಗಾಗಿದ್ದ ರೋಗಿಗಳನ್ನು ಪರೀಕ್ಷೆಗೆ ಗುರಿಪಡಿಸಲಾಗಿತ್ತು.

ಗ್ಯಾಸ್ ಟ್ರಾನ್ಸ್ ಫರ್ ಎಂಬ ಅತ್ಯಂತ ಸೂಕ್ಷ್ಮ ಶ್ವಾಸಕೋಶ ಪರೀಕ್ಷೆಯು ಉಸಿರಾಡುವ ಗಾಳಿಯಿಂದ ಆಮ್ಲಜನಕವನ್ನು ರಕ್ತನಾಳಕ್ಕೆ ವರ್ಗಾಯಿಸುವ ಸಾಮರ್ಥ್ಯವನ್ನು ಅಧ್ಯಯನ ಮಾಡಲಾಗಿದೆ. ಇದು ಶೇಕಡ 44ರಷ್ಟು ಮಂದಿಯಲ್ಲಿ ತೀವ್ರ ಪರಿಣಾಮ ಬೀರಿದ್ದು, ಇದು ಆತಂಕಕಾರಿ ಬೆಳವಣಿಗೆ ಎಂದು ವರದಿ ಹೇಳಿದೆ. ಶೇಕಡ 35ರಷ್ಟು ಮಂದಿಯಲ್ಲಿ ಪ್ರತಿಬಂಧಾತ್ಮಕ ಶ್ವಾಸಕೋಶ ದೋಷ ಕಾಣಿಸಿಕೊಂಡಿದೆ. ಶೇಕಡ 8.3ರಷ್ಟು ಮಂದಿಯಲ್ಲಿ ತಡೆಯಾತ್ಮಕ ದೋಷ ಕಾಣಿಸಿಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News