ಪ್ರಯಾಗ್ ರಾಜ್ ನಲ್ಲಿ ಇಂದು ಮಹಾಕುಂಭ ಮೇಳಕ್ಕೆ ಚಾಲನೆ
ಲಕ್ನೋ: ಮೈಕೊರೆಯುವ ಚಳಿಯಲ್ಲಿ, ಆಗಸದಿಂದ ಇನ್ನೂ ಸೂರ್ಯಕಿರಣ ಭೂಮಿಗೆ ಸೋಕುವ ಮುನ್ನ ಲಕ್ಷಾಂತರ ಮಂದಿ ಭಕ್ತರು, ಸಂತರು, ಸ್ವಾಮೀಜಿಗಳು ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಕೈಗೊಳ್ಳುವ ಮೂಲಕ ಸೋಮವಾರ 45 ದಿನಗಳ ಮಹಾಕುಂಭ ಮೇಳಕ್ಕೆ ಚಾಲನೆ ದೊರಕಿದೆ.
ಪೌಷ ಪೂರ್ಣಿಮೆಯ ಸಂದರ್ಭದ ಮೊದಲ ಪವಿತ್ರ ಸ್ನಾನದ ಮುನ್ನಾ ದಿನವಾದ ಭಾನುವಾರು ಸುಮಾರು 50 ಲಕ್ಷ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಪುನೀತರಾದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮೇಳ ಹಲವು ಕಾರಣಗಳಿಂದ ಈ ವರ್ಷ ಮಹತ್ವದ್ದು ಎನಿಸಿದೆ. ಜನವರಿ 13ರಂದು ಪೌಷಪೂರ್ಣಿಮೆ ಹಾಗೂ 14ರಂದು ಮಕರಸಂಕ್ರಾಂತಿ ಸಂದರ್ಭದ ಎರಡು ಶಹಿ ಸ್ನಾನ (ಅಮೃತ ಸ್ನಾನ)ಗಳೊಂದಿಗೆ ಮಹಾಕುಂಭಮೇಳ ಆರಂಭವಾಗಲಿದೆ. 144 ವರ್ಷಗಳಿಗೊಮ್ಮೆ ಬರುವ ಅಪರೂಪದ ಗ್ರಹಕೂಟದಂತೆ ಸೋಮವಾರ ಪೌಷ್ಯ ನಕ್ಷತ್ರ ಇರುವುದು ಅತ್ಯಂತ ವಿಶೇಷ ಎನಿಸಿದೆ.
10 ಸಾವಿರ ಎಕರೆಯ ವಿಶಾಲ ಕುಂಭಮೇಳ ಪ್ರದೇಶ ಏಳು ಸುತ್ತಿನ ಭದ್ರತಾ ಕೋಟೆಯಿಂದ ಸುತ್ತುವರಿದಿದ್ದು, ಯಾತ್ರಿಗಳ ಸುರಕ್ಷತೆಗೆ ಗಮನ ಹರಿಸಲಾಗಿದೆ. 45 ದಿನಗಳ ಅವಧಿಯಲ್ಲಿ 40 ಕೋಟಿಗೂ ಅಧಿಕ ಮಂದಿ ಪವಿತ್ರಸ್ನಾನ ಕೈಗೊಳ್ಳುವ ನಿರೀಕ್ಷೆ ಇದೆ. ಈ ಅವಧಿಯಲ್ಲಿ ಒಟ್ಟು ಆರು ಪವಿತ್ರಸ್ನಾನಗಳು ನಡೆಯಲಿವೆ. ಮೊದಲ ಎರಡು ಸ್ನಾನಗಳ ಹೊರತಾಗಿ ಜನವರಿ 29ರ ಮೌನಿ ಅಮಾವಾಸ್ಯೆ, ಫೆಬ್ರುವರಿ 3ರಂದು ಬಸಂತ ಪಂಚಮಿ, ಫೆಬ್ರುವರಿ 12ರ ಮಾಘ ಪೂರ್ಣಿಮೆ ಮತ್ತು ಫೆಬ್ರುವರಿ 26ರ ಮಹಾಶಿವರಾತ್ರಿ ಸಂದರ್ಭದಲ್ಲಿ ಪವಿತ್ರಸ್ನಾನ ಇರುತ್ತದೆ. ಇದರೊಂದಿಗೆ ಮಹಾಕುಂಭ ಮುಕ್ತಾಯವಾಗುತ್ತದೆ.