ಕೇಜ್ರಿವಾಲ್ ವಿರುದ್ಧದ ಪಿತೂರಿಯ ಭಾಗವಾಗಲು ಬಿಜೆಪಿಯಿಂದ ಮಲಿವಾಲ್‌ ರ ಬ್ಲಾಕ್‌ಮೇಲ್: ಆತಿಶಿ

Update: 2024-05-18 15:41 GMT

ಆತಿಶಿ | PC : PTI  

ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಹಾಗೂ ಆಪ್ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ಹಲ್ಲೆಗೈದಿದ್ದಾರೆ ಎಂದು ಆರೋಪಿಸಿರುವ ಪಕ್ಷದ ಸಂಸದೆ ಸ್ವಾತಿ ಮಲಿವಾಲ್ ಅವರು ಅಕ್ರಮ ನೇಮಕಾತಿ ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ಅವರ ವಿರುದ್ಧ ‘ಪಿತೂರಿ’ಯ ಭಾಗವಾಗಲು ಬಿಜೆಪಿಯಿಂದ ಬ್ಲಾಕ್‌ಮೇಲ್‌ಗೆ ಒಳಗಾಗಿದ್ದಾರೆ ಎಂದು ಆಪ್ ನಾಯಕಿ ಆತಿಶಿ ಶನಿವಾರ ಪ್ರತಿಪಾದಿಸಿದ್ದಾರೆ.

ಪಿಟಿಐ-ವೀಡಿಯೊದೊಂದಿಗೆ ಮಾತನಾಡಿದ ದಿಲ್ಲಿ ಸರಕಾರದ ಸಂಪುಟ ಸಚಿವೆ ಕೂಡ ಆಗಿರುವ ಆತಿಶಿ ಅವರು, ಸ್ವಾತಿ ಮಲಿವಾಲ್ ಅವರು ಸಂದರ್ಶನ ನಿಗದಿಯಾಗದ ಹೊರತಾಗಿಯೂ ಸೋಮವಾರ ಮುಖ್ಯಮಂತ್ರಿ ಅವರ ನಿವಾಸಕ್ಕೆ ತೆರಳಿದ್ದರು ಎಂದಿದ್ದಾರೆ.

‘‘ಅವರು ಯಾಕೆ ಒಳಗೆ ನುಗ್ಗಿದರು? ಸಂದರ್ಶನಕ್ಕೆ ಅನುಮತಿ ಪಡೆಯದೆ ಅವರು ಮುಖ್ಯಮಂತ್ರಿ ನಿವಾಸಕ್ಕೆ ಏಕೆ ಹೋದರು? ಅಂದು ಅರವಿಂದ್‌ ಕೇಜ್ರಿವಾಲ್ ಅವರು ವ್ಯಸ್ತರಾಗಿದ್ದರು. ಅವರು ಮಲಿವಾಲ್ ಅವರನ್ನು ಭೇಟಿಯಾಗಲಿಲ್ಲ. ಒಂದು ವೇಳೆ ಅಂದು ಅವರು ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದರೆ, ಬಿಭವ್ ಕುಮಾರ್ ಅವರ ಬದಲು ಕೇಜ್ರಿವಾಲ್ ಅವರ ಮೇಲೆ ಆರೋಪ ಮಾಡುವ ಸಾಧ್ಯತೆ ಇತ್ತು’’ ಎಂದು ಆತಿಶಿ ಹೇಳಿದ್ದಾರೆ.

‘‘ಬಿಜೆಪಿಯವರು ಒಂದು ಮಾದರಿಯನ್ನು ಹೊಂದಿದ್ದಾರೆ. ಮೊದಲು ಅವರು ಪ್ರಕರಣ ದಾಖಲಿಸುತ್ತಾರೆ. ಅನಂತರ ಜೈಲಿಗೆ ಕಳುಹಿಸುವುದಾಗಿ ನಾಯಕರಿಗೆ ಬೆದರಿಕೆ ಒಡ್ಡುತ್ತಾರೆ. ಸ್ವಾತಿ ಮಲಿವಾಲ್ ಅವರು ಭ್ರಷ್ಟಾಚಾರ ವಿರೋಧಿ ದಳ ದಾಖಲಿಸಿದ ಅಕ್ರಮ ನೇಮಕಾತಿ ಪ್ರಕರಣ ಎದುರಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮಲಿವಾಲ್ ಅವರನ್ನು ಬ್ಲಾಕ್‌ಮೇಲ್ ಮಾಡಿದೆ ಹಾಗೂ ಅವರನ್ನು ಪಿತೂರಿಯ ಮುಖವಾಡವನ್ನಾಗಿ ಮಾಡಿದೆ’’ ಎಂದು ಆಪ್ ನಾಯಕಿ ಆತಿಶಿ ಆರೋಪಿಸಿದ್ದಾರೆ.

ಮತ್ತೊಂದು ವೀಡಿಯೊ ಬಿಡುಗಡೆ

ಸಂಸದೆ ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ಅವರ ನಿವಾಸದ ಸಿಸಿಟಿವಿಯ ಹೊಸ ದೃಶ್ಯಾವಳಿಗಳನ್ನು ಆಮ್ ಆದ್ಮಿ ಪಕ್ಷ ಶನಿವಾರ ಬಿಡುಗಡೆ ಮಾಡಿದೆ. ಅಲ್ಲದೆ, ಮಲಿವಾಲ್ ಅವರ ಆರೋಪ ಆಧಾರ ರಹಿತ ಎಂದು ಹೇಳಿದೆ. ದಿಲ್ಲಿ ಪೊಲೀಸರ ಎಫ್‌ಐಆರ್‌ ನ ಆರೋಪಗಳು ಸುಳ್ಳು ಎಂಬುದನ್ನು ವೀಡಿಯೊ ಸಾಬೀತುಪಡಿಸಿದೆ ಎಂದು ಆಪ್ ಪ್ರತಿಪಾದಿಸಿದೆ.

ಸಿಸಿಟಿವಿ ದೃಶ್ಯಾವಳಿ ಪ್ರಕಾರ ಸ್ವಾತಿ ಮಲಿವಾಲ್‌ಗೆ ಗಾಯಗಳಾಗಿಲ್ಲ. ಆದರೆ, ತನಗೆ ನಡೆಯಲು ಸಾಧ್ಯವಾಗುತ್ತಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. ವೀಡಿಯೊ ದೃಶ್ಯಾವಳಿ ಮಲಿವಾಲ್ ಅವರು ಅರವಿಂದ್‌ ಕೇಜ್ರಿವಾಲ್ ಅವರ ನಿವಾಸದಿಂದ ಹೊರಡುವಾಗ ಆರೋಗ್ಯವಾಗಿದ್ದರು ಎಂಬುದನ್ನು ತೋರಿಸಿದೆ ಎಂದು ಆತಿಶಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News