ಮಣಿಪುರ: ನಾಗರಿಕರ ಹತ್ಯೆ ತನಿಖೆಗೆ ಎಸ್ ಐ ಟಿ ರೂಪಿಸಿದ ಸರಕಾರ
ಗುವಾಹಟಿ: ಜನವರಿ 1ರಂದು ನಡೆದ ನಾಗರಿಕ ಹತ್ಯೆ ಕುರಿತಂತೆ ತನಿಖೆ ನಡೆಸಲು ಮಣಿಪುರ ಸರಕಾರ ವಿಶೇಷ ತನಿಖಾ ತಂಡ (ಎಸ್ ಐ ಟಿ)ವನ್ನು ರೂಪಿಸಿದೆ.
ರಾಜ್ಯದ ಥೌಬಾಲ್ ಜಿಲ್ಲೆಯ ಮೈತೈ ಪಾಂಗಲ್ ಅಥವಾ ಮೈತೈ ಮುಸ್ಲಿಂ ಪ್ರಾಬಲ್ಯ ಪ್ರದೇಶವಾದ ಲಿಲೋಂಗ್ ಚಿಂಗ್ಜಾವೊದಲ್ಲಿ ಸಶಸ್ತ್ರ ಉಗ್ರರ ಗುಂಡಿನ ದಾಳಿಗೆ ನಾಲ್ವರು ನಾಗರಿಕರು ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರ ಗಾಯಗೊಂಡಿದ್ದ ಮುಹಮ್ಮದ್ ಅಬ್ದುಲ್ ರಜಾಕ್ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಸಂಜೆ ಮೃತಪಟ್ಟಿದ್ದರು.
ಶಸಸ್ತ್ರ ಉಗ್ರರು ನಡೆಸಿದ ಈ ಗುಂಡಿನ ದಾಳಿಯಲ್ಲಿ 12ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಈ ಗುಂಡಿನ ದಾಳಿಯ ಜವಾಬ್ದಾರಿಯನ್ನು ರೆವಲ್ಯೂಷನರಿ ಪೀಪಲ್ಸ್ ಫ್ರಂಟ್ ಹೊತ್ತುಕೊಂಡಿತ್ತು.
ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಮುಹಮ್ಮದ್ ರಿಯಾಝುದ್ದೀನ್ ಶಾ ಮೂವರು ಸದಸ್ಯರ ಎಸ್ ಐ ಟಿ ತಂಡ ಮುಖ್ಯಸ್ಥ ಎಂದು ಅಧಿಕೃತ ಆದೇಶ ಹೇಳಿದೆ. ಇದೇ ಶ್ರೇಣಿಯ ಇನ್ನೋರ್ವ ಅಧಿಕಾರಿ ಎನ್. ಸುರೇಶ್ ಸಿಂಗ್, ಇನ್ಸ್ಪೆಕ್ಟರ್ ಮಸೂದ್ ಹಾಗೂ ಸಬ್ ಇನ್ಸ್ಪೆಕ್ಟರ್ಗಳಾದ ಮುಹಮ್ಮದ್ ಅನ್ವರ್ ಹುಸೈನ್, ಎಸ್. ಭೂಬನ್ ಸಿಂಗ್ ಹಾಗೂ ಎನ್. ಥಾಮಸ್ ಸಿಂಗ್ ಅವರು ತಂಡದ ಉಳಿದ ಸದಸ್ಯರು.