ಹನ್ನೊಂದು ವರ್ಷಗಳ ಒಳಗೆ ದೇಶದಲ್ಲಿ ಗರಿಷ್ಠ ಹುಲಿಗಳ ಸಾವು!

Update: 2023-09-30 02:14 GMT

ಪುಣೆ: ದೇಶದಲ್ಲಿ ಪ್ರಸಕ್ತ ವರ್ಷದ ಮೊದಲ ಒಂಬತ್ತು ತಿಂಗಳುಗಳಲ್ಲಿ 146 ಹುಲಿಗಳು ಮೃತಪಟ್ಟಿವೆ. 2012ರ ಬಳಿಕ ಗರಿಷ್ಠ ಸಂಖ್ಯೆಯ ಹುಲಿಗಳು ಮೃತಪಟ್ಟಂತಾಗಿವೆ ಎನ್ನುವ ಅಂಶ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. ಹುಲಿ ಸಂರಕ್ಷಣೆಗೆ ಪ್ರಯತ್ನಗಳನ್ನು ನಡೆಸುತ್ತಿರುವ ಭಾರತದ ಪ್ರಯತ್ನಗಳ ನಡುವೆಯೇ ಆತಂಕಕಾರಿ ಎನಿಸುವಂಥ ಮತ್ತೊಂದು ಬೆಳವಣಿಗೆ ದಾಖಲಾಗಿದ್ದು, ಮೃತಪಟ್ಟ ಹುಲಿಗಳ ವಿವಿಧ ಭಾಗಗಳನ್ನು ವಶಪಡಿಸಿಕೊಂಡ 14 ಪ್ರಕರಣಗಳು ಬೆಳಕಿಗೆ ಬಂದಿವೆ. ಇದು ಕೂಡಾ 2014ರ ಬಳಿಕ ಗರಿಷ್ಠ ಎಂದು ವರದಿಯೊಂದು ತಿಳಿಸಿದೆ.

ಮಧ್ಯಪ್ರದೇಶ (34) ಮತ್ತು ಮಹಾರಾಷ್ಟ್ರ (32) ರಾಜ್ಯಗಳಲ್ಲಿ ಗರಿಷ್ಠ ಸಂಖ್ಯೆಯ ಹುಲಿ ಸಾವಿನ ಪ್ರಕರಣಗಳು ವರದಿಯಾಗಿವೆ. ಒಂಬತ್ತು ತಿಂಗಳಲ್ಲಿ ಮೃತಪಟ್ಟ 146 ಹುಲಿಗಳ ಪೈಕಿ 24 ಮರಿಗಳು. ಇದು ಹುಲಿಗಳ ವಂಶ ಅಭಿವೃದ್ಧಿ ಸಾಧ್ಯತೆಯ ಮೇಲೆ ನೇರ ಪರಿಣಾಮ ಬೀರುವಂಥದ್ದು. ಉತ್ತರಾಖಂಡದಲ್ಲಿ 17, ಅಸ್ಸಾಂನಲ್ಲಿ 11, ಕರ್ನಾಟಕದಲ್ಲಿ ಒಂಬತ್ತು, ರಾಜಸ್ಥಾನದಲ್ಲಿ 5 ಹುಲಿಗಳು ಮೃತಪಟ್ಟಿವೆ. ಇದರ ಜತೆಗೆ ದೇಶದ ವಿವಿಧ ಕಡೆಗಳಲಲಿ ಹುಲಿ ರಕ್ಷಿತಾರಣ್ಯದ ನಡುವೆ 70 ಹುಲಿಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ.

ದೇಶದಲ್ಲಿ 2022ರಲ್ಲಿ 121, 2021ರಲ್ಲಿ 127, 2020ರಲ್ಲಿ 106, 2019ರಲ್ಲಿ 96, 2018ರಲ್ಲಿ 101, 2017ರಲ್ಲಿ 117, 2016ರಲ್ಲಿ 121, 2015ರಲ್ಲಿ 82, 2014ರಲ್ಲಿ 78 ಹಾಗೂ 2012ರಲ್ಲಿ 88 ಹುಲಿಗಳು ಮೃತಪಟ್ಟಿರುವುದನ್ನು ಎನ್ಟಿಸಿಎ ಅಂಕಿ ಅಂಶಗಳು ಹೇಳುತ್ತವೆ. ಇದರಲ್ಲಿ ಹುಲಿಗಳ ಸಹಜ ಸಾವು ಮತ್ತು ಆಕಸ್ಮಿಕ, ಸಂಘರ್ಷ, ಕಳ್ಳಬೇಟೆಯಂಥ ಅಸಹಜ ಸಾವಿನ ಪ್ರಕರಣಗಳು ಸೇರಿವೆ.

"ಈ ವರ್ಷ ಸಾಮಾನ್ಯವಾಗಿ ಕಳ್ಳಬೇಟೆ ಪ್ರಕರಣಗಳು ಹೆಚ್ಚಿರುವುದನ್ನು ಕಾಣುತ್ತೇವೆ. ಪೊಲೀಸರು ಹುಲಿ ಚರ್ಮ ಹಾಗೂ ಉಗುರುಗಳನ್ನು ವಶಪಡಿಸಿಕೊಂಡಿದ್ದು, ಇದಕ್ಕಾಗಿ ಹುಲಿಗಳಿಗೆ ವಿಷಪ್ರಾಶನ ಮಡಿರುವ ಸಾಧ್ಯತೆಯೂ ಇದೆ" ಎಂದು ಯುನೈಟೆಡ್ ಕನ್ಸರ್ವೇಶನ್ ಮೂವ್ ಮೆಂಟ್ ಟ್ರಸ್ಟಿ ಹಾಗೂ ಕರ್ನಾಟಕ ರಾಜ್ಯ ವನ್ಯ ಮಂಡಳಿ ಸದಸ್ಯ ಜೋಸೆಫ್ ಹೂವರ್ ಹೇಳುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News