ಬಿಜೆಪಿ ನಿಯೋಗ ಮೋದಿಯನ್ನು ಭೇಟಿ ಮಾಡಬೇಕು ಹೊರತು ಅಕಾಲ್ ತಖ್ತ್ ಮುಖ್ಯಸ್ಥರನ್ನಲ್ಲ : ಉಪವಾಸ ನಿರತ ಜಗಜಿತ್ ಸಿಂಗ್ ದಲ್ಲೆವಾಲ್
ಪಂಜಾಬ್ : ಜಗಜಿತ್ ಸಿಂಗ್ ದಲ್ಲೆವಾಲ್ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಲು ಮಧ್ಯಪ್ರವೇಶಿಸುವಂತೆ ಪಂಜಾಬ್ ಬಿಜೆಪಿ ಅಕಾಲ್ ತಖ್ತ್ ಗೆ ಮನವಿಯನ್ನು ಮಾಡಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿದ ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್, ಉಪವಾಸ ಸತ್ಯಾಗ್ರಹ ಕೊನೆಗೊಳಿಸಬೇಕಿದ್ದರೆ ಬಿಜೆಪಿಯು ಪ್ರಧಾನಿ ಮೋದಿಯನ್ನು ಭೇಟಿ ಮಾಡಬೇಕು ಹೊರತು ಅಕಾಲ್ ತಖ್ತ್ ಮುಖ್ಯಸ್ಥರನ್ನಲ್ಲ ಎಂದು ಹೇಳಿದ್ದಾರೆ.
ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಅವರು ನಡೆಸುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹ 47ನೇ ದಿನಕ್ಕೆ ಕಾಲಿಟ್ಟಿದೆ. ಶುಕ್ರವಾರ ಬಿಡುಗಡೆ ಮಾಡಿದ ಮೂರು ನಿಮಿಷಗಳ ವೀಡಿಯೊ ಸಂದೇಶದಲ್ಲಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಸೇರಿದಂತೆ ರೈತರ ಬೇಡಿಕೆಗಳನ್ನು ಕೇಂದ್ರವು ಒಪ್ಪಿಕೊಂಡ ನಂತರವೇ ಉಪವಾಸವನ್ನು ಕೊನೆಗೊಳಿಸುವುದಾಗಿ ಜಗಜಿತ್ ಸಿಂಗ್ ದಲ್ಲೆವಾಲ್ ಹೇಳಿದ್ದಾರೆ.
ಸುಖ್ಮಿಂದರ್ ಪಾಲ್ ಸಿಂಗ್ ಗ್ರೆವಾಲ್ ಮತ್ತು ಸರ್ಚಂದ್ ಸಿಂಗ್ ಅವರನ್ನೊಳಗೊಂಡ ಬಿಜೆಪಿ ನಿಯೋಗವು ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಅನಿರ್ದಿಷ್ಟಾವಧಿ ಉಪವಾಸವನ್ನು ಅಂತ್ಯಗೊಳಿಸುವಂತೆ ಮಧ್ಯಪ್ರವೇಶಿಸಲು ಅಕಾಲ್ ತಖ್ತ್ ಜತೇದಾರ್ ಗಿಯಾನಿ ರಘಬೀರ್ ಸಿಂಗ್ ಅವರಿಗೆ ಗುರುವಾರ ಮನವಿ ಸಲ್ಲಿಸಿತ್ತು. ದಲ್ಲೆವಾಲ್ ಅವರ ಆರೋಗ್ಯ ಹದಗೆಟ್ಟಿರುವ ಬಗ್ಗೆ ನಿಯೋಗ ಕಳವಳ ವ್ಯಕ್ತಪಡಿಸಿತ್ತು.
ದಲ್ಲೆವಾಲ್ ಅವರು ವೀಡಿಯೊ ಸಂದೇಶದಲ್ಲಿ, " ಆಮರಣಾಂತ ಉಪವಾಸವನ್ನು ಕೊನೆಗೊಳಿಸಲು ಮಧ್ಯಪ್ರವೇಶಿಸುವಂತೆ ಬಿಜೆಪಿಯ ಪಂಜಾಬ್ ಘಟಕದ ನಾಯಕರು ಅಕಾಲ್ ತಖ್ತ್ ಗೆ ಮನವಿ ಮಾಡಿದ್ದಾರೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. ನಾನು ಅಕಾಲ್ ತಖ್ತ್ ಅನ್ನು ಗೌರವಿಸುತ್ತೇನೆ. ಆದರೆ, ಪಂಜಾಬ್ ಬಿಜೆಪಿಯು ಪ್ರಧಾನಿ ಮೋದಿ, ಉಪರಾಷ್ಟ್ರಪತಿ ಜಗದೀಪ್ ಧನ್ಕರ್, ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಗೃಹ ಸಚಿವ ಅಮಿತ್ ಶಾ ಅವರನ್ನು ಸಂಪರ್ಕಿಸಬೇಕು. ಅವರನ್ನು ಭೇಟಿ ಮಾಡುವ ಬದಲು ಅವರು ಅಕಲ್ ತಖ್ತ್ ಜತೇದಾರ್ ಅವರನ್ನು ಸಂಪರ್ಕಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾದ ಸಂಚಾಲಕರಾಗಿರುವ ದಲ್ಲೆವಾಲ್ ಅವರು ಕಳೆದ ನವೆಂಬರ್ 26 ರಿಂದ ಪಂಜಾಬ್ ಮತ್ತು ಹರ್ಯಾಣದ ಖಾನೌರಿ ಗಡಿಯಲ್ಲಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ದೀರ್ಘಾವಧಿಯ ಉಪವಾಸದ ಅವಧಿಯಲ್ಲಿ ಯಾವುದೇ ವೈದ್ಯಕೀಯ ನೆರವು ಪಡೆಯಲು ದಲ್ಲೆವಾಲ್ ನಿರಾಕರಿಸಿದ್ದಾರೆ, ಇದರಿಂದಾಗಿ ಅವರ ಆರೋಗ್ಯವು ಹದಗೆಡುತ್ತಿದೆ.