ಮರಣ ದಂಡನೆ ವಿಧಿಸಲ್ಪಟ್ಟ ಆರೋಪಿಗಳ ಕ್ಷಮಾದಾನ ಅರ್ಜಿ: ರಾಷ್ಟ್ರಪತಿ ನಿರ್ಧಾರವೇ ಅಂತಿಮ, ಹೊಸ ಮಸೂದೆ

Update: 2023-08-31 06:24 GMT

ಹೊಸದಿಲ್ಲಿ: ಮರಣ ದಂಡನೆ ವಿಧಿಸಲ್ಪಟ್ಟ ಆರೋಪಿಗಳ ಕ್ಷಮಾದಾನ ಅರ್ಜಿಯ ಬಗ್ಗೆ ರಾಷ್ಟ್ರಪತಿ ಕೈಗೊಂಡ ನಿರ್ಧಾರವೇ ಅಂತಿಮ. ಸಂವಿಧಾನದ 72ನೇ ವಿಧಿ ಅನ್ವಯ ಕ್ಷಮಾದಾನ ನೀಡುವುದು ಅಥವಾ ಗಲ್ಲು ಶಿಕ್ಷೆಗೆ ಆದೇಶಿಸುವ ರಾಷ್ಟ್ರಪತಿ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲದ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮಸೂದೆ (ಬಿಎನ್‍ಎಸ್‍ಎಸ್)ಯನ್ನು ಮಂಡಿಸಲು ಸರ್ಕಾರ ಸಜ್ಜಾಗಿದೆ. ರಾಷ್ಟ್ರಪತಿ ನಿರ್ಧಾರ ವಿಚಾರದಲ್ಲಿ ಕೋರ್ಟ್‍ಗಳು ಮಧ್ಯಪ್ರವೇಶ ಮಾಡುವುದನ್ನು ಕೂಡಾ ಉದ್ದೇಶಿತ ಮಸೂದೆ ತಡೆಯಲಿದೆ.

"ರಾಷ್ಟ್ರಪತಿಗಳು ಸಂವಿಧಾನದ 72ನೇ ವಿಧಿ ಅನ್ವಯ ಕೈಗೊಂಡ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸುವಂತಿಲ್ಲ. ಅದು ಅಂತಿಮವಾಗಬೇಕು ಹಾಗೂ ರಾಷ್ಟ್ರಪತಿಗಳ ನಿರ್ಧಾರದ ವಿಷಯದಲ್ಲಿ ಎದುರಾಗುವ ಯಾವುದೇ ಪ್ರಶ್ನೆಗಳ ಬಗ್ಗೆ ನ್ಯಾಯಾಲಯ ವಿಚಾರಣೆ ನಡೆಸುವಂತಿಲ್ಲ" ಎಂದು ಬಿಎನ್‍ಎಸ್‍ಎಸ್ ಮಸೂದೆಯಲ್ಲಿ ಸೇರ್ಪಡೆಯಾಗುವ ಸೆಕ್ಷನ್ 473 ಸ್ಪಷ್ಟಪಡಿಸಿದೆ. ಹಾಲಿ ಇರುವ ಅಪರಾಧ ಪ್ರಕ್ರಿಯೆ ಸಂಹಿತೆಯ ಜಾಗದಲ್ಲಿ ಹೊಸ ಮಸೂದೆ ಜಾರಿಗೆ ಬರಲಿದೆ.

ಈ ಬದಲಾವಣೆ ವ್ಯಾಪಕ ಪರಿಣಾಮ ಬೀರಲಿದ್ದು, ಗಲ್ಲುಶಿಕ್ಷೆಗೆ ಒಳಗಾದವರು ಕುಣಿಕೆಗೆ ಕೊರಳೊಡ್ಡುವ ಮುನ್ನ ನ್ಯಾಯಾಂಗ ಪರಿಹಾರವನ್ನು ಪಡೆಯುವ ಅವಕಾಶ ಇಲ್ಲದಾಗುತ್ತದೆ.

ಕ್ಷಮಾದಾನಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿ ಅಥವಾ ರಾಜ್ಯಪಾಲರು ನೀಡುವ ನಿರ್ಧಾರಗಳು ನ್ಯಾಯಸಮ್ಮತವಾಗಿರಬೇಕು ಮತ್ತು ಅನಗತ್ಯ ಹಾಗೂ ವಿವರಿಸಲಾಗದ ವಿಳಂಬ ಏಕಾಂತ ಬಂಧನದಂತಹ ಕಾರಣಗಳಲ್ಲಿ ಇದನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಲು ಅವಕಾಶವಿದೆ ಎಂದು ಸುಪ್ರೀಂಕೋರ್ಟ್ ಈ ಹಿಂದೆ ತೀರ್ಪು ನೀಡಿತ್ತು. ಬಹಳಷ್ಟು ಮಂದಿ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಿದ ಅಪರಾಧಿಗಳು, ರಾಷ್ಟ್ರಪತಿಗಳು ಈ ಅರ್ಜಿ ತಿರಸ್ಕರಿಸಿದ ಸಂದರ್ಭದಲ್ಲಿ ನ್ಯಾಯಾಲಯದ ಮೊರೆ ಹೋಗುತ್ತಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News