ಉತ್ಕೃಷ್ಟ ಗುಣಮಟ್ಟದ 500 ರೂ. ಮುಖ ಬೆಲೆಯ ನಕಲಿ ನೋಟುಗಳ ಕುರಿತು ಎಚ್ಚರಿಸಿದ ಕೇಂದ್ರ ಗೃಹ ಸಚಿವಾಲಯ; ನಕಲಿ ನೋಟುಗಳನ್ನು ಗುರುತಿಸುವುದು ಹೇಗೆ?

Update: 2025-04-21 22:24 IST
ಉತ್ಕೃಷ್ಟ ಗುಣಮಟ್ಟದ 500 ರೂ. ಮುಖ ಬೆಲೆಯ ನಕಲಿ ನೋಟುಗಳ ಕುರಿತು ಎಚ್ಚರಿಸಿದ ಕೇಂದ್ರ ಗೃಹ ಸಚಿವಾಲಯ; ನಕಲಿ ನೋಟುಗಳನ್ನು ಗುರುತಿಸುವುದು ಹೇಗೆ?

Photo : PTI

  • whatsapp icon

ಹೊಸದಿಲ್ಲಿ: ಸಾರ್ವಜನಿಕ ಚಲಾವಣೆಗೆ ಬಂದಿರುವ ಹೊಸ ಬಗೆಯ 500 ರೂ. ಮುಖ ಬೆಲೆಯ ನಕಲಿ ನೋಟುಗಳ ಕುರಿತು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಪ್ರಮುಖ ಎಚ್ಚರಿಕೆಯನ್ನು ಬಿಡುಗಡೆ ಮಾಡಿದೆ. ಡಿಆರ್ಐ, ಎಫ್ಐಯು, ಸಿಬಿಐ, ಎನ್ಐಎ, ಸೆಬಿ ಇತ್ಯಾದಿ ಪ್ರಮುಖ ಹಣಕಾಸು ಮತ್ತು ನಿಯಂತ್ರಣ ಸಂಸ್ಥೆಗಳ ಮೂಲಕ ಬಿಡುಗಡೆಯಾಗಿರುವ ಈ ಎಚ್ಚರಿಕೆಯಲ್ಲಿ, ಗುಣಮಟ್ಟ ಹಾಗೂ ಮುದ್ರಣದಲ್ಲಿ ನೈಜ ನೋಟುಗಳನ್ನೇ ಹೆಚ್ಚು ಹೋಲುವ ನಕಲಿ ನೋಟುಗಳನ್ನು ಪತ್ತೆ ಹಚ್ಚುವುದು ಮತ್ತಷ್ಟು ಕ್ಲಿಷ್ಟಕರವಾಗಿ ಪರಿಣಮಿಸಿದೆ ಎಂದು ಹೇಳಲಾಗಿದೆ.

ನೈಜ ನೋಟುಗಳನ್ನೇ ಬಹುತೇಕ ಹೋಲುತ್ತಿರುವ 500 ರೂ. ಮುಖ ಬೆಲೆಯ ನಕಲಿ ನೋಟುಗಳು ಸಣ್ಣ, ಮಹತ್ವದ ಕಾಗುಣಿತ ದೋಷವನ್ನು ಹೊಂದಿವೆ. ಈ ದೋಷವು ‘RESERVE BANK OF INDIA’ ಎಂಬ ನುಡಿಗಟ್ಟಿನಲ್ಲಿ ಕಂಡು ಬಂದಿದ್ದು, ‘RESERVE’ ಪದದಲ್ಲಿ ‘E’ ಅಕ್ಷರದ ಬದಲು ‘A’ ಅಕ್ಷರವನ್ನು ಕಣ್ತಪ್ಪಿನಿಂದ ಮುದ್ರಿಸಲಾಗಿದೆ.

ಈ ಅಕ್ಷರವನ್ನು ಉಲ್ಲೇಖಿಸಿ ಮಾತನಾಡಿದ ಹಿರಿಯ ಸರಕಾರಿ ಅಧಿಕಾರಿಯೊಬ್ಬರು, “ಈ ಕ್ಷುಲ್ಲಕ ತಪ್ಪನ್ನು ನಿಕಟವಾಗಿ ಗಮನಿಸದೆ ಹೋದರೆ, ಈ ನಕಲಿ ನೋಟುಗಳು ನಿರ್ದಿಷ್ಟವಾಗಿ ಅಪಾಯಕಾರಿಯಾಗಲಿವೆ” ಎಂದು ಎಚ್ಚರಿಸಿದ್ದಾರೆ.

ಈ ನಕಲಿ ನೋಟುಗಳು ಈಗಾಗಲೇ ಮಾರುಕಟ್ಟೆಗೆ ಬೃಹತ್ ಪ್ರಮಾಣದಲ್ಲಿ ಪ್ರವೇಶಿಸಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ, ಹಣಕಾಸು ಸಂಸ್ಥೆಗಳು, ಬ್ಯಾಂಕ್ ಗಳು ಹಾಗೂ ಸಂಬಂಧಿತ ಸಂಸ್ಥೆಗಳನ್ನು ತೀವ್ರ ಕಟ್ಟೆಚ್ಚರದಲ್ಲಿಡಲಾಗಿದೆ. ಈ ನಕಲಿ ನೋಟಿನ ಪತ್ತೆಗೆ ನೆರವು ನೀಡಲು ಈ ನಕಲಿ ನೋಟಿನ ಚಿತ್ರವನ್ನೂ ಹಂಚಿಕೊಳ್ಳಲಾಗಿದೆ.

ಈ ಕುರಿತು ಜಾಗರೂಕರಾಗಿರಬೇಕು ಎಂದು ನಾಗರಿಕರು ಹಾಗೂ ಹಣಕಾಸು ಸಂಸ್ಥೆಗಳಿಗೆ ಸೂಚಿಸಿರುವ ಪ್ರಾಧಿಕಾರಗಳು, ಯಾವುದೇ ಬಗೆಯ ಅನುಮಾನಾಸ್ಪದ ನೋಟುಗಳ ಕುರಿತು ವರದಿ ಮಾಡುವಂತೆ ನಿರ್ದೇಶನ ನೀಡಿವೆ.

ಭಯೋತ್ಪಾದನಾ ಹಣಕಾಸು ನೆರವಿನ ಕುರಿತು ನಡೆಯುತ್ತಿರುವ ತನಿಖೆಯಲ್ಲಿ ಭಾಗಿಯಾಗಿರುವ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, “ಎಷ್ಟು ಪ್ರಮಾಣದ ನಕಲಿ ನೋಟುಗಳು ಚಲಾವಣೆಯಲ್ಲಿವೆ ಎಂದು ಅಂದಾಜಿಸಲು ಯಾವುದೇ ತನಿಖಾ ಸಂಸ್ಥೆಗಳಿಗೂ ಸಾಧ್ಯವಿಲ್ಲ. ಸಾರ್ವಜನಿಕರ ಮೂಲಕ ಬ್ಯಾಂಕ್ ಗಳಿಗೆ ಸಲ್ಲಿಕೆಯಾಗಿರುವ ನಕಲಿ ನೋಟುಗಳು ಸೇರಿದಂತೆ ವಿವಿಧ ಮೂಲಗಳ ಮೂಲಕ ಚಲಾವಣೆಯಲ್ಲಿರುವ ನಕಲಿ ನೋಟುಗಳ ದತ್ತಾಂಶ ಮಾತ್ರ ಸರಕಾರದ ಬಳಿ ಲಭ್ಯವಿದೆ. ಆದರೆ, ಈ ಅಂಕಿ-ಸಂಖ್ಯೆಗಿಂತ ನಕಲಿ ನೋಟುಗಳ ಸಂಖ್ಯೆ ಅಧಿಕವಾಗಿದೆ” ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ನಕಲಿ ನೋಟುಗಳ ಹಾವಳಿಯನ್ನು ನಿಯಂತ್ರಿಸುವ ಕ್ರಮಗಳ ಕುರಿತು ಲೋಕಸಭಾ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ್ದ ಕೇಂದ್ರ ಸರಕಾರ, “ಭಾರತೀಯ ನ್ಯಾಯ ಸಂಹಿತೆ, 2023 ಹಾಗೂ ಅಕ್ರಮ ಚಟುವಟಿಕೆಗಳು (ತಡೆ) ಕಾಯ್ದೆ, 1967 ಸೇರಿದಂತೆ, ರಾಷ್ಟ್ರೀಯ ತನಿಖಾ ದಳ, FICN ಸಮನ್ವಯ ಗುಂಪು ಹಾಗೂ ಭಯೋತ್ಪಾದನಾ ನೆರವು ಮತ್ತು ನಕಲಿ ನೋಟು ಘಟಕದ ಸ್ಥಾಪನೆಗಳಡಿಯ ದಂಡನಾರ್ಹ ನಿಯಮಗಳ ಜಾರಿಯನ್ನು ಈ ಕ್ರಮಗಳು ಒಳಗೊಂಡಿವೆ” ಎಂದು ಕೇಂದ್ರ ಸರಕಾರ ಹೇಳಿತ್ತು.

ನಕಲಿ ನೋಟುಗಳ ಪತ್ತೆಗೆ ನೆರವು ನೀಡಲು, ಎಲ್ಲ ಬ್ಯಾಂಕ್ ಶಾಖೆಗಳು, ಗುರುತಿಸಲಾದ ಬ್ಯಾಕ್ ಆಫೀಸ್ ಗಳು ಹಾಗೂ ಕರೆನ್ಸಿ ಚೆಸ್ಟ್ ಶಾಖೆಗಳನ್ನು ಸೂಕ್ತ ಬ್ಯಾಂಕ್ ನೋಟುಗಳ ವರ್ಗೀಕರಣ, ಪರಿಶೀಲನೆ, ಪ್ರಕ್ರಿಯೆ ಹಾಗೂ ಪತ್ತೆ ಯಂತ್ರಗಳ ಮೂಲಕ ಸಜ್ಜುಗೊಳಿಸಲಾಗಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News