ಟಿಕೆಟ್ ಕೇಳಿದ್ದಕ್ಕೆ ಚಲಿಸುತ್ತಿದ್ದ ರೈಲಿನಿಂದ ತಳ್ಳಿದ ವಲಸೆ ಕಾರ್ಮಿಕ, ಟಿಟಿಇ ಮೃತ್ಯು
ತ್ರಿಶೂರು : ಟಿಕೆಟ್ ಪರಿಶೀಲನೆ ವೇಳೆ ವಲಸೆ ಕಾರ್ಮಿಕನೋರ್ವ ತಳ್ಳಿದ ಪರಿಣಾಮ, ಚಲಿಸುತ್ತಿದ್ದ ರೈಲಿನಿಂದ ಬಿದ್ದು ಪ್ರಯಾಣಿಕ ಟಿಕೆಟ್ ಪರೀಕ್ಷಕ (ಟಿಟಿಇ) ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ತ್ರಿಶೂರಿನಲ್ಲಿ ನಡೆದಿದೆ ಎಂದು thehindu.com ವರದಿ ಮಾಡಿದೆ.
ಮೃತಪಟ್ಟವರನ್ನು ಎರ್ನಾಕುಲಂ-ಪಾಟ್ನಾ ರೈಲಿನ ಪ್ರಯಾಣಿಕ ಟಿಕೆಟ್ ಪರೀಕ್ಷಕ (ಟಿಟಿಇ) ರನ್ನು ಕೆ.ವಿನೋದ್ ಎಂದು ತಿಳಿದು ಬಂದಿದೆ. ತಳ್ಳಿದ ವ್ಯಕ್ತಿಯನ್ನು ಒಡಿಶಾದ ವಿಶೇಷಚೇತನ ವಲಸೆ ಕಾರ್ಮಿಕ ರಜನಿಕಾಂತ್ ಎಂದು ಗುರುತಿಸಲಾಗಿದೆ.
ಮುಳಂಗುನ್ನತುಕಾವು ಮತ್ತು ವಡಕ್ಕಂಚೇರಿ ರೈಲು ನಿಲ್ದಾಣಗಳ ನಡುವಿನ ವೇಲಪ್ಪಯ ಎಂಬಲ್ಲಿ ಘಟನೆ ನಡೆದಿದೆ.
ರೈಲಿನಲ್ಲಿ ಅನೇಕ ವಲಸೆ ಕಾರ್ಮಿಕರು ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ. ಈ ನಡುವೆ ವಿನೋದ್ ಟಿಕೆಟ್ ಪರಿಶೀಲಿಸುತ್ತಿದ್ದರು. ಟಿಕೆಟ್ ರಹಿತ ಪ್ರಯಾಣ ಮಾಡುತ್ತಿದ್ದ ರಜನಿಕಾಂತ್, ಟಿಟಿಇ ಜೊತೆ ವಾಗ್ವಾದಕ್ಕಿಳಿದಿದ್ದು, ಮುಂದಿನ ನಿಲ್ದಾಣದಲ್ಲಿ ಇಳಿಯುವಂತೆ ವಿನೋದ್ ಹೇಳಿದ್ದಾರೆ. ಇದರಿಂದ ಕೋಪಗೊಂದ ವಲಸೆ ಕಾರ್ಮಿಕ ರಜನೀಕಾಂತ್, ಟಿಟಿಇ ವಿನೋದ್ ಅವರನ್ನು ತಳ್ಳಿದರು ಎನ್ನಲಾಗಿದೆ.
ಕೂಡಲೇ, ಇತರ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿ ರಜನಿಕಾಂತ್ ನನ್ನು ಪಾಲಕ್ಕಾಡ್ ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತನನ್ನು ತ್ರಿಶೂರ್ ಪೊಲೀಸರಿಗೆ ಒಪ್ಪಿಸಲಾಗುವುದು ಎಂದು ತಿಳಿದು ಬಂದಿದೆ.