ವಕ್ಫ್ ಕಾಯ್ದೆ ಜಾರಿಗೆ ನಿರಾಕರಿಸಿರುವ ತಮಿಳುನಾಡು, ಪಶ್ಚಿಮ ಬಂಗಾಳವನ್ನು ಕೇರಳವೂ ಅನುಸರಿಸಬೇಕು: ಕೇರಳ ಮುಸ್ಲಿಂ ಸಂಘಟನೆಗಳ ಆಗ್ರಹ

PC : PTI
ತಿರುವನಂತಪುರಂ: ರಾಜ್ಯದಲ್ಲಿ ವಿವಾದಾತ್ಮಕ ವಕ್ಫ್ ಕಾಯ್ದೆಯನ್ನು ಜಾರಿಗೊಳಿಸುವುದಿಲ್ಲ ಎಂಬ ನಿರ್ಣಯವನ್ನು ಕೇರಳ ವಿಧಾನಸಭೆಯಲ್ಲಿ ಅಂಗೀಕರಿಸಬೇಕು ಎಂದು ರಾಜ್ಯದ ಆಡಳಿತಾರೂಢ ಎಡರಂಗ ಸರಕಾರ ಹಾಗೂ ವಿರೋಧ ಪಕ್ಷಗಳನ್ನು ಕೇರಳದ ಮುಸ್ಲಿಂ ಸಂಘಟನೆಗಳು ಆಗ್ರಹಿಸಿವೆ.
ಈ ಸಂಬಂಧ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಿಂದ ಕೇರಳ ಕೂಡಾ ಪ್ರೇರಣೆ ಪಡೆಯಬೇಕು ಎಂದು ಅವು ಕರೆ ನೀಡಿವೆ.
ಇದಕ್ಕೂ ಮುನ್ನ, ರಾಜ್ಯದಲ್ಲಿ ವಕ್ಫ್ ಕಾಯ್ದೆ ಜಾರಿಯಾಗಲು ಅವಕಾಶ ನೀಡುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದರು. ಮತ್ತೊಂದೆಡೆ, ವಕ್ಫ್ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರಕಾರ ಹಿಂಪಡೆಯಬೇಕು ಎಂದು ಮಸೂದೆಯು ಸಂಸತ್ತಿನಲ್ಲಿ ಅಂಗೀಕಾರಗೊಳ್ಳುವುದಕ್ಕೂ ಮುನ್ನ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯವೊಂದನ್ನು ಅಂಗೀಕರಿಸಲಾಗಿತ್ತು.
ಇದಲ್ಲದೆ, ವಕ್ಫ್ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಸರಕಾರ ಸುಪ್ರೀಂ ಕೋರ್ಟ್ ಮೆಟ್ಟಿಲನ್ನೂ ಏರಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ದಕ್ಷಿಣ ಕೇರಳ ಜಮಾಯತುಲ್ ಉಲಾಮಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ತೊಡಿಯೂರ್ ಮುಹಮ್ಮದ್ ಕುಂಜಿ ಮೌಲವಿ, “ಸ್ಟಾಲಿನ್ ಈಗಾಗಲೇ ಪ್ರಕಟಣೆಯೊಂದನ್ನು ಹೊರಡಿಸಿದ್ದು, ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಯ ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯವೊಂದನ್ನೂ ಅಂಗೀಕರಿಸಲಾಗಿದೆ. ಕೇರಳ ಸರಕಾರ ಕೂಡಾ ಇಂತಹ ನಿರ್ಣಯವೊಂದನ್ನು ಅಂಗೀಕರಿಸಬೇಕು ಎಂದು ನಾವು ಆಗ್ರಹಿಸುತ್ತೇವೆ” ಎಂದು ಹೇಳಿದ್ದಾರೆ.
ಇತ್ತೀಚೆಗೆ ಅಂಗೀಕಾರಗೊಂಡಿರುವ ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಕೇರಳ ರಾಜಭವನಕ್ಕೆ ಜಂಟಿ ಪಾದಯಾತ್ರೆ ನಡೆಸಿದ ಇನ್ನಿತರ ಮುಸ್ಲಿಂ ಸಂಘಟನೆಗಳೂ ಕೂಡಾ ಇದೇ ಬೇಡಿಕೆಯನ್ನು ಮುಂದಿಟ್ಟಿವೆ.