2020-21ರಲ್ಲಿ ಉನ್ನತ ಶಿಕ್ಷಣದಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಸಂಖ್ಯೆ 1.79 ಲಕ್ಷದಷ್ಟು ಕುಸಿತ
ಹೊಸದಿಲ್ಲಿ: 2020-21ರಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ 18ರಿಂದ 23 ವರ್ಷ ವಯೋಮಾನದ ಮುಸ್ಲಿಂ ವಿದ್ಯಾರ್ಥಿಗಳ ದಾಖಲಾತಿಯು ಶೇ.8.5ಕ್ಕೂ ಹೆಚ್ಚು ಕುಸಿದಿದೆ ಎಂದು ಇತ್ತೀಚಿನ ವರದಿಯೊಂದು ಹೇಳಿದೆ. ಯೂನಿಫೈಡ್ ಡಿಸ್ಟ್ರಿಕ್ಟ್ ಇನ್ಫಾರ್ಮೇಷನ್ ಸಿಸ್ಟಮ್ ಫಾರ್ ಎಜ್ಯುಕೇಷನ್ ಪ್ಲಸ್ ಮತ್ತು ಆಲ್ ಇಂಡಿಯಾ ಸರ್ವೆ ಆಫ್ ಹೈಯರ್ ಎಜ್ಯುಕೇಷನ್ನಿಂದ ಲಭ್ಯ ದತ್ತಾಂಶಗಳನ್ನು ವಿಶ್ಲೇಷಿಸಿ ಈ ವರದಿಯನ್ನು ಸಿದ್ಧಗೊಳಿಸಲಾಗಿದೆ ಎಂದು thehindu.com ವರದಿ ಮಾಡಿದೆ.
2019-20ರಲ್ಲಿ 21 ಲಕ್ಷ ಮುಸ್ಲಿಂ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದರೆ 2020-21ರಲ್ಲಿ ಈ ಸಂಖ್ಯೆ 19.21 ಲಕ್ಷಕ್ಕೆ ಕುಸಿದಿದೆ.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಜ್ಯುಕೇಷನ್ ಪ್ಲ್ಯಾನಿಂಗ್ ಆ್ಯಂಡ್ ಅಡ್ಮಿನಿಸ್ಟ್ರೇಷನ್ನ ಮಾಜಿ ಪ್ರೊಫೆಸರ್ ಅರುಣ ಸಿ.ಮೆಹ್ತಾ ಅವರು ಸಿದ್ಧಪಡಿಸಿರುವ ‘ಭಾರತದಲ್ಲಿ ಮುಸ್ಲಿಮ್ ಶಿಕ್ಷಣದ ಸ್ಥಿತಿ’ ವರದಿಯ ಪ್ರಕಾರ, 2016-17ರಲ್ಲಿ 17,39,218 ಮುಸ್ಲಿಂ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದರೆ 2020-21ರಲ್ಲಿ ಈ ಸಂಖ್ಯೆ 19,21,713ಕ್ಕೇರಿದೆ. ಆದಾಗ್ಯೂ 2020-21ರಲ್ಲಿ ಉನ್ನತ ಶಿಕ್ಷಣದಲ್ಲಿ ಪ್ರವೇಶ ಪಡೆದ ಮುಸ್ಲಿಂ ವಿದ್ಯಾರ್ಥಿಗಳ ಸಂಖ್ಯೆ 2019-20ರಲ್ಲಿದ್ದ 21,00,860ರಿಂದ 19,21,713ಕ್ಕೆ ಕುಸಿದಿದೆ. ಒಟ್ಟಾರೆಯಾಗಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ 1,79,147ರಷ್ಟು ಇಳಿಕೆಯಾಗಿದೆ.
ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಸಿದರೆ 2016-17ರಲ್ಲಿ ಶೇ.4.87ರಷ್ಟಿದ್ದ ಮುಸ್ಲಿಂ ವಿದ್ಯಾರ್ಥಿಗಳ ಪ್ರಮಾಣವೂ 2020-21ರಲ್ಲಿ ಶೇ.4.64ಕ್ಕೆ ಕುಸಿದಿದೆ.
11 ಮತ್ತು 12ನೇ ತರಗತಿಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ದಾಖಲಾತಿಯ ಶೇಕಡಾವಾರು ಪ್ರಮಾಣ ಹಿಂದಿನ ತರಗತಿಗಳಿಗಿಂತ ಕಡಿಮೆಯಿರುವುದು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಕಂಡುಬಂದಿರುವ ಗಮನಾರ್ಹ ಪ್ರವೃತ್ತಿಯಾಗಿದೆ. ಮುಸ್ಲಿಂ ವಿದ್ಯಾರ್ಥಿಗಳ ಪ್ರಾತಿನಿಧ್ಯವು ಆರನೇ ತರಗತಿಯಿಂದ ಕ್ರಮೇಣ ಕ್ಷೀಣಿಸತೊಡಗುತ್ತದೆ ಹಾಗೂ 11 ಮತ್ತು 12 ನೇ ತರಗತಿಗಳಲ್ಲಿ ಕನಿಷ್ಠ ಮಟ್ಟದಲ್ಲಿರುತ್ತದೆ.
ಉನ್ನತ ಪ್ರಾಥಮಿಕ ಹಂತ (6ರಿಂದ 8ನೇ ತರಗತಿ)ದಲ್ಲಿ 6.67 ಕೋಟಿ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಪಾಲು ಸುಮಾರು ಶೇ.14.42ರಷ್ಟಿದ್ದರೆ ಪ್ರೌಢ ಶಿಕ್ಷಣ ಹಂತ (9 ಮತ್ತು 10ನೇ ತರಗತಿ)ದಲ್ಲಿ ಶೇ.12.62 ರಷ್ಟು ಮತ್ತು ಉನ್ನತ ಪ್ರೌಢ ಶಿಕ್ಷಣ ಹಂತ (11 ಮತ್ತು 12ನೇ ತರಗತಿ)ದಲ್ಲಿ ಶೇ.10.76ರಷ್ಟಿದೆ ಎಂದು ವರದಿಯು ಹೇಳಿದೆ.
ಬಿಹಾರ ಮತ್ತು ಮಧ್ಯಪ್ರದೇಶಗಳಂತಹ ರಾಜ್ಯಗಳು ಮುಸ್ಲಿಂ ವಿದ್ಯಾರ್ಥಿಗಳಿಗೆ ತುಲನಾತ್ಮಕವಾಗಿ ಕಡಿಮೆ ಒಟ್ಟು ದಾಖಲಾತಿ ಅನುಪಾತವನ್ನು ಹೊಂದಿದ್ದು,ಈ ರಾಜ್ಯಗಳಲ್ಲಿ ಅನೇಕ ಮುಸ್ಲಿಂ ಮಕ್ಕಳು ಈಗಲೂ ಶಿಕ್ಷಣ ವ್ಯವಸ್ಥೆಯಿಂದ ಹೊರಗುಳಿದಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ. ಶಾಲೆಯಿಂದ ಹೊರಗಿರುವ ಮಕ್ಕಳನ್ನು ಗುರುತಿಸುವುದು ಮತ್ತು ವಯಸ್ಸಿಗೆ ಅನುಗುಣವಾದ ತರಗತಿಗಳಿಗೆ ದಾಖಲಿಸುವುದು ಆದ್ಯತೆಯಾಗಿರಬೇಕು ಎಂದು ವರದಿಯು ಶಿಫಾರಸು ಮಾಡಿದೆ.
ಪ್ರೌಢ ಶಿಕ್ಷಣ ಹಂತದಲ್ಲಿ ದಾಖಲಾಗುವ ಮುಸ್ಲಿಂ ವಿದ್ಯಾರ್ಥಿಗಳ ಪೈಕಿ ಶೇ.18.64ರಷ್ಟು ಮಕ್ಕಳು ಶಾಲೆಗಳನ್ನು ತೊರೆಯುತ್ತಾರೆ ಮತ್ತು ಇದು ಈ ಹಂತದಲ್ಲಿ ಶಾಲೆ ತೊರೆಯುವ ಎಲ್ಲ ಮಕ್ಕಳ ಶೇಕಡಾವಾರು ಪ್ರಮಾಣ (ಶೇ.12.6)ಕ್ಕಿಂತ ಅಧಿಕವಾಗಿದೆ.
ಅಸ್ಸಾಂ (ಶೇ.29.52) ಮತ್ತು ಪ.ಬಂಗಾಳ (ಶೇ.23.22)ದಲ್ಲಿ ಹೆಚ್ಚಿನ ಸಂಖ್ಯೆಯ ಮುಸ್ಲಿಮ್ ವಿದ್ಯಾರ್ಥಿಗಳು ಪ್ರೌಢ ಶಿಕ್ಷಣ ಹಂತದಲ್ಲಿ ಶಾಲೆಯನ್ನು ತೊರೆಯುತ್ತಿದ್ದರೆ ಈ ಪ್ರಮಾಣ ಜಮ್ಮು-ಕಾಶ್ಮೀರದಲ್ಲಿ ಶೇ.5.1 ಮತ್ತು ಕೇರಳದಲ್ಲಿ ಶೇ.11.91ರಷ್ಟು ಇದೆ.
ಅನೇಕ ಮುಸ್ಲಿಮ್ ವಿದ್ಯಾರ್ಥಿಗಳು ಕಡಿಮೆ ಆದಾಯದ ಕುಟುಂಬಗಳಿಗೆ ಸೇರಿದ್ದು,ಉನ್ನತ ಶಿಕ್ಷಣದ ವೆಚ್ಚವನ್ನು ಭರಿಸಲು ಪರದಾಡುತ್ತಾರೆ. ಈ ಸಮಸ್ಯೆಯನ್ನು ನಿವಾರಿಸಲು ಹಣಕಾಸಿನ ತೊಂದರೆಗಳನ್ನು ಎದುರಿಸುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಒದಗಿಸುವುದು ಅಗತ್ಯವಾಗಿದೆ. ಮುಸ್ಲಿಮ್ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ವೇತನಗಳು,ಅನುದಾನಗಳು ಮತ್ತು ಹಣಕಾಸು ನೆರವು ಅವಕಾಶಗಳನ್ನು ಹೆಚ್ಚಿಸುವುದು ಅವರ ಆರ್ಥಿಕ ಹೊರೆಯನ್ನು ಗಣನೀಯವಾಗಿ ತಗ್ಗಿಸುತ್ತದೆ ಮತ್ತು ಹೆಚ್ಚಿನ ಅರ್ಹ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಲು ನೆರವಾಗುತ್ತದೆ ಎಂದು ವರದಿಯು ಶಿಫಾರಸು ಮಾಡಿದೆ.