“30 ವರ್ಷಗಳ ಹಿಂದಿನ ಅದೇ ಉತ್ತರ ನನ್ನದು”: ರಾಮ ಮಂದಿರ ಕುರಿತು ಕಮಲ್‌ ಹಾಸನ್‌ ಪ್ರತಿಕ್ರಿಯೆ

Update: 2024-01-25 05:37 GMT

Photo: facebook.com/iKamalHaasan

ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಯನ್ನು ದೇಶದ ಹಲವಾರು ಸೆಲೆಬ್ರಿಟಿಗಳು ಕೊಂಡಾಡಿದ್ದರೆ, ಇನ್ನು ಕೆಲ ನಟ, ನಿರ್ದೇಶಕರು ಬೇರೆ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದರು.

ರಾಮ ಮಂದಿರ ಉದ್ಘಾಟನೆ ಬಗ್ಗೆ ಹಿರಿಯ ನಟ, ರಾಜಕಾರಣಿ ಕಮಲ್‌ ಹಾಸನ್‌ ಅವರನ್ನು ಮಾಧ್ಯಮ ಮಂದಿ ಪ್ರಶ್ನಿಸಿದಾಗ ಅವರು ನೇರ ಉತ್ತರ ನೀಡದೆ ತಾವು 30 ವರ್ಷಗಳ ಹಿಂದೆ ಹೊಂದಿದ್ದ ಅದೇ ಅಭಿಪ್ರಾಯ ಈಗಲೂ ಹೊಂದಿರುವುದಾಗಿ ಹೇಳಿದರು.

ಡಿಸೆಂಬರ್‌ 6, 1992 ರಂದು ಬಾಬ್ರಿ ಮಸೀದಿ ಧ್ವಂಸದ ಸಂದರ್ಭದ ತಮ್ಮ ಹೇಳಿಕೆಯನ್ನು ಕಮಲ್‌ ಹಾಸನ್‌ ಉಲ್ಲೇಖಿಸುತ್ತಿದ್ದರು. ಆ ಘಟನೆಯ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದ ಕೆಲವೇ ಕೆಲವು ಸೆಲೆಬ್ರಿಟಿಗಳಲ್ಲಿ ಆಗ ಕಮಲ್‌ ಒಬ್ಬರಾಗಿದ್ದರು. “ಬಾಬ್ರಿ ಮಸೀದಿ ಧ್ವಂಸಗೊಳಿಸುವ ಹಕ್ಕು ಯಾರಿಗೂ ಇರಲಿಲ್ಲ. ತಂಜಾವೂರು ದೇವಸ್ಥಾನ ಮತ್ತು ವೆಲೆಂಕಣ್ಣಿ ಚರ್ಚ್ ಹೇಗೆ ನನ್ನದೋ ಅದೇ ರೀತಿ ಆ ಕಟ್ಟಡ ಕೂಡ ನನ್ನದು,” ಎಂದು ಅವರು ಆಗ ಹೇಳಿದ್ದರು.

ಬಿಜೆಪಿಯ ಹಿರಿಯ ನಾಯಕ ಎಲ್‌ ಕೆ ಅಡ್ವಾಣಿ ಸಹಿತ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಎಲ್ಲಾ ಆರೋಪಿಗಳನ್ನು 2020ರಲ್ಲಿ ಸುಪ್ರೀಂ ಕೋರ್ಟ್‌ ಖುಲಾಸೆಗೊಳಿಸಿದಾಗ ಕಮಲ್‌ ಹಾಸನ್‌ ಮಾಡಿದ್ದ ಟ್ವೀಟ್‌ ಕೂಡ ಗಮನ ಸೆಳೆದಿತ್ತು. “ಗಟ್ಟಿಯಾದ ಪುರಾವೆ ಮತ್ತು ಬಲವಾದ ವಾದಗಳನ್ನು ಮಂಡಿಸದೇ ಇರುವುದು ಪ್ರಾಸಿಕ್ಯೂಶನ್‌ನ ಬೇಜವಾಬ್ದಾರಿಯಾಗಿದೆಯೇ ಅಥವಾ ಇದೊಂದು ಯೋಜಿತ ಕ್ರಮವೇ? ನ್ಯಾಯಕ್ಕಾಗಿ ಭಾರತೀಯರ ಆಶಾವಾದ ನಿಷ್ಪ್ರಯೋಜಕವಾಗಬಾರದು,” ಎಂದು ಕಮಲ್‌ ಹಾಸನ್‌ ಆಗ ಟ್ವೀಟ್‌ ಮಾಡಿದ್ದರು.

ಮಹಾತ್ಮ ಗಾಂಧೀಜಿ ಅವರ ಹತ್ಯೆಯನ್ನಾಧರಿತ ಹೇ ರಾಮ್‌ ಸಹಿತ ತಮ್ಮ ಸಿನಿಮಗಾಗಳಲ್ಲೂ ಬಲಪಂಥೀಯ ತೀವ್ರವಾದದ ಟೀಕಾಕಾರರಾಗಿದ್ದಾರೆ ಕಮಲ್‌ ಹಾಸನ್. ಆದರೆ ಅವರ ಸಿನಿಮಾ ವಿಶ್ವರೂಪಂ ಮುಸ್ಲಿಮರನ್ನು ಬಿಂಬಿಸಿದ ರೀತಿಗಾಗಿ ಆ ಸಮುದಾಯದಿಂದ ಟೀಕೆಗೊಳಗಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News