ಪರೀಕ್ಷೆಯಲ್ಲಿ ಅನುತ್ತೀರ್ಣ | ಕಾಲೇಜು ಬದಲಾಯಿಸಲು ಹೇಳಿದ್ದಕ್ಕೆ ಪೋಷಕರನ್ನೇ ಹತ್ಯೆಗೈದ ವಿದ್ಯಾರ್ಥಿ!
ನಾಗ್ಪುರ : ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದಕ್ಕೆ ಕಾಲೇಜು ಬದಲಾಯಿಸಲು ಹೇಳಿದ್ದಕ್ಕೆ ಪೋಷಕರನ್ನೇ ವಿದ್ಯಾರ್ಥಿಯೋರ್ವ ಹತ್ಯೆಗೈದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ಪೋಷಕರನ್ನು ಹತ್ಯೆಗೈದ ವಿದ್ಯಾರ್ಥಿಯನ್ನು, 25 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಉತ್ಕರ್ಷ್ ದಾಖೋಲೆ ಎಂದು ಗುರುತಿಸಲಾಗಿದೆ. ಘಟನೆ ಡಿಸೆಂಬರ್ 26 ರಂದು ನಡೆದಿದ್ದು, ಜನವರಿ 1 ರಂದು ನಗರದ ಮನೆಯೊಂದರಲ್ಲಿ ಲೀಲಾಧರ್ ದಾಖೋಲೆ (55) ಮತ್ತು ಅವರ ಪತ್ನಿ ಅರುಣಾ ದಾಖೋಲೆ (50) ಅವರ ಶವಗಳು ಪತ್ತೆಯಾದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಉತ್ಕರ್ಷ್ ದಾಖೋಲೆ ತನ್ನ ಇಂಜಿನಿಯರಿಂಗ್ ಪರೀಕ್ಷೆಗಳಲ್ಲಿ ಪದೇ ಪದೇ ಅನುತ್ತೀರ್ಣನಾಗಿದ್ದನು. ಕಾಲೇಜು ಬದಲಾಯಿಸುವಂತೆ ಪೋಷಕರು ಹಲವಾರು ಬಾರಿ ಆತನಿಗೆ ಹೇಳಿದ್ದರಿಂದ ಒತ್ತಡಕ್ಕೆ ಒಳಗಾಗಿದ್ದನು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಇದರಿಂದ ಕೋಪಗೊಂಡ ಉತ್ಕರ್ಷ್ ಮೊದಲು ತನ್ನ ತಾಯಿಯ ಕತ್ತು ಹಿಸುಕಿ ನಂತರ ತಂದೆಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಪ ಪೊಲೀಸ್ ಆಯುಕ್ತ (ವಲಯ 5) ನಿಕೇತನ್ ಕದಮ್ ಅವರ ಪ್ರಕಾರ, ಪೊಲೀಸ್ ಕಂಟ್ರೋಲ್ ರೂಂಗೆ ಮನೆಯೊಂದರಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ಕರೆ ಬಂದಿತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ದಂಪತಿಯ ಶವಗಳು ಪತ್ತೆಯಾಗಿದೆ.
"ಉತ್ಕರ್ಷ್ ತನ್ನ ಎಂಜಿನಿಯರಿಂಗ್ ಕೋರ್ಸ್ನಲ್ಲಿ ಹಲವಾರು ವಿಷಯಗಳಲ್ಲಿ ಉತ್ತೀರ್ಣನಾಗಲು ವಿಫಲನಾಗಿದ್ದನು. ಆದ್ದರಿಂದ ಆತನ ಪೋಷಕರು, ಆತ ಎಂಜಿನಿಯರಿಂಗ್ ತೊರೆದು ಬೇರೆ ಯಾವುದನ್ನಾದರೂ ಆಯ್ಕೆ ಮಾಡಲು ಬಯಸಿದ್ದರು. ಆದರೆ, ಉತ್ಕರ್ಷ್ ಗೆ ಈ ಸಲಹೆ ಹಿಡಿಸಿರಲಿಲ್ಲ," ಎಂದು ಪೊಲೀಸ್ ಅಧಿಕಾರಿಯು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ತಂದೆ-ತಾಯಿಯನ್ನು ಕೊಲೆ ಬಳಿಕ ಆರೋಪಿಯು, ಅಪರಾಧದ ಅರಿವಿಲ್ಲದ ತನ್ನ ಸಹೋದರಿಯನ್ನು ಸಂಬಂಧಿಕರ ಮನೆಗೆ ಕಳುಹಿಸಿದ್ದಾನೆ. ಕೆಲವು ದಿನಗಳ ಕಾಲ ಧ್ಯಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ತನ್ನ ಪೋಷಕರು ಹೋಗಿದ್ದರು, ಅಲ್ಲಿ ಮೊಬೈಲ್ ಫೋನ್ ಬಳಕೆಗೆ ಅವಕಾಶವಿರುವುದಿಲ್ಲ ಎಂದು ಎಂದು ಅವನು ತನ್ನ ಸಹೋದರಿಗೆ ತಿಳಿಸಿದ್ದನು.
ಉತ್ಕರ್ಷ್ ದಾಖೋಲೆಯನ್ನು ಬಂಧಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.