ಸಲ್ಮಾನ್ ಖಾನ್ ಗೆ ಹೊಸ ಬೆದರಿಕೆ: ರಾಜ್ಯದಲ್ಲಿ ಶಂಕಿತನ ಜಾಡು ಪತ್ತೆ
ಮುಂಬೈ: ಜೈಲಿನಲ್ಲಿರುವ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿಯ ಸಹೋದರ ಎಂದು ಹೇಳಿಕೊಂಡ ವ್ಯಕ್ತಿಯಿಂದ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಕರೆ ಮತ್ತು 5 ಕೋಟಿ ರೂಪಾಯಿ ನೀಡುವಂತೆ ಒತ್ತಡ ಬಂದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ.
ಕರ್ನಾಟಕದ ಹುಬ್ಬಳ್ಳಿಯಲ್ಲಿ ಶಂಕಿತ ಆರೋಪಿಯ ಜಾಡು ಪತ್ತೆಯಾಗಿದೆ. ತಕ್ಷಣಕ್ಕೆ ಆತನನ್ನು ಬಂಧಿಸಿಲ್ಲವಾದರೂ, ಪೊಲೀಸ್ ತಂಡ ಹುಬ್ಬಳ್ಳಿಗೆ ತಲುಪಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಕಟಿಸಿದ್ದಾರೆ.
1998ರ ಕೃಷ್ಣಮೃಗ ಕಳ್ಳಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಮೆ ಯಾಚಿಸಬೇಕು ಎಂಬ ವಾಟ್ಸಪ್ ಸಂದೇಶ ಸಲ್ಮಾನ್ ಖಾನ್ ಅವರಿಗೆ ಬಂದಿತ್ತು. ವರ್ಲಿಯಲ್ಲಿರುವ ಮುಂಬೈ ಸಂಚಾರ ಪೊಲೀಸ್ ನಿಯಂತ್ರಣ ಕಚೇರಿಯ ವಾಟ್ಸಪ್ ಸಹಾಯವಾಣಿಗೆ ಸೋಮವಾರ ಮಧ್ಯರಾತ್ರಿ ಈ ಸಂದೇಶ ಬಂದಿತ್ತು. ಈ ಸಂದೇಶವನ್ನು ಕಳುಹಿಸಿದ ವ್ಯಕ್ತಿ ಲಾರೆನ್ಸ್ ಬಿಷ್ಣೋಯಿಯ ಸಹೋದರ ಎಂದು ಹೇಳಿಕೊಂಡಿದ್ದ.
"ಸಲ್ಮಾನ್ ಖಾನ್ ಜೀವಂತವಾಗಿ ಇರಲು ಬಯಸುವುದಾದರೆ, ನಮ್ಮ (ಬಿಷ್ಣೋಯಿ ಸಮುದಾಯ) ದೇವಾಲಯಕ್ಕೆ ತೆರಳಿ ಕ್ಷಮೆ ಯಾಚಿಸಬೇಕು ಇಲ್ಲವೇ ಐದು ಕೋಟಿ ರೂಪಾಯಿಗಳನ್ನು ಪಾವತಿಸಬೇಕು. ಅವರು ಹಾಗೆ ಮಾಡದಿದ್ದಲ್ಲಿ, ನಾವು ಅವರನ್ನು ಹತ್ಯೆ ಮಾಡುತ್ತೇವೆ. ನಮ್ಮ ಗ್ಯಾಂಗ್ ಇನ್ನೂ ಜೀವಂತವಾಗಿದೆ" ಎಂದು ಸಂದೇಶದಲ್ಲಿ ತಿಳಿಸಲಾಗಿತ್ತು. ಈ ಸಂಬಂಧ ವರ್ಲಿಯಲ್ಲಿ ಪ್ರಕರಣ ದಾಖಲಿಸಿ, ಸಲ್ಮಾನ್ ಖಾನ್ ಅವರ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು.