Fact Check| ಪ್ರಧಾನಿ ಮೋದಿ ಕುರಿತ ರೈತನಾಯಕನ ಹೇಳಿಕೆಯ ತಿರುಚಿದ ವೀಡಿಯೊ ಬಳಸಿ ರೈತ ಆಂದೋಲನದ ಅಜೆಂಡಾ ಪ್ರಶ್ನಿಸಿದ ಮಾಧ್ಯಮಗಳು

Update: 2024-02-22 15:20 GMT

ಹೊಸದಿಲ್ಲಿ: ರೈತರ ಆಂದೋಲನಕ್ಕೆ ಸಂಬಂಧಿಸಿದ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ರಾಮಮಂದಿರ ಉದ್ಘಾಟನೆಯ ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯ ಗ್ರಾಫ್ ಗಗನಕ್ಕೇರಿದೆ ಮತ್ತು ಸಾರ್ವಕಾಲಿಕ ಎತ್ತರವನ್ನು ತಲುಪಿದೆ ಎಂದು ವೀಡಿಯೊದಲ್ಲಿ ಹೇಳಿರುವ ರೈತ ನಾಯಕ ಜಗಜಿತ ಸಿಂಗ್ ದಲ್ಲೆವಾಲ್, ಕೆಲವೇ ದಿನಗಳಲ್ಲಿ ಅದನ್ನು ಹೇಗೆ ಕೆಳಕ್ಕಿಳಿಸಬಹುದು ಎನ್ನುವುದನ್ನು ಯೋಚಿಸುವಂತೆ ಕೇಳುಗರಿಗೆ ಕರೆ ನೀಡಿರುವಂತೆ ಕಂಡು ಬರುತ್ತಿದೆ.

ಹಲವಾರು ಸುದ್ದಿವಾಹಿನಿಗಳು, ಬಿಜೆಪಿ ನಾಯಕರು, ಬಲಪಂಥೀಯರು ಈ ವೀಡಿಯೊವನ್ನು ಹಂಚಿಕೊಂಡಿದ್ದು, ಮೋದಿ ಸರಕಾರದ ವರ್ಚಸ್ಸಿಗೆ ಮಸಿ ಬಳಿಯುವುದು ರೈತರ ಆಂದೋಲನದ ಏಕೈಕ ಉದ್ದೇಶವಾಗಿದೆ ಎಂಬ ಫರ್ಮಾನು ಹೊರಡಿಸಿದ್ದಾರೆ. ಸರಕಾರದ ಸಲಹೆಗಾರರೂ ಈ ಗುಂಪಿನಲ್ಲಿ ಸೇರಿದ್ದಾರೆ. ಈ ಎಲ್ಲರೂ ರೈತರ ಆಂದೋಲನದ ಹಿಂದಿನ ಉದ್ದೇಶ ರಾಜಕೀಯವಾಗಿದೆ, ಮೋದಿಯವರ ಜನಪ್ರಿಯತೆಯನ್ನು ಕೆಳಕ್ಕಿಳಿಸುವುದಾಗಿದೆ ಮತ್ತು ಪ್ರತಿಪಕ್ಷಗಳಿಗೆ ನೆರವಾಗುವುದಾಗಿದೆ ಎಂದೇ ಹೇಳಿದ್ದಾರೆ.

ಸತ್ಯಶೋಧಕ ಜಾಲತಾಣ Alt News ಈ ವೈರಲ್ ವೀಡಿಯೊದ ಸತ್ಯಾಸತ್ಯತೆಯನ್ನು ಒರೆಗೆ ಹಚ್ಚಿದಾಗ ಇದು ತಿರುಚಲ್ಪಟ್ಟ ವೀಡಿಯೊ ಎನ್ನುವುದು ಬಹಿರಂಗಗೊಂಡಿದೆ. ‘ದಿ ಅನ್ಮ್ಯೂಟ್’ ಹೆಸರಿನ ಫೇಸ್ಬುಕ್ ಪೇಜ್ ನಲ್ಲಿಯ 26 ನಿಮಿಷಗಳ ಪೂರ್ಣ ವೀಡಿಯೊವನ್ನು Alt News ಜಾಲಾಡಿದೆ.

ದಲ್ಲೆವಾಲ್ ಅವರು ಪ್ರಧಾನಿಯವರ ಜನಪ್ರಿಯತೆಯನ್ನು ತಗ್ಗಿಸುವುದು ಮತ್ತು ಅವರ ಗ್ರಾಫ್ ಅನ್ನು ಕೆಳಕ್ಕಿಳಿಸುವುದು ರೈತ ಚಳವಳಿಯ ಉದ್ದೇಶ ಎಂದು ಹೇಳುತ್ತಿರುವಂತೆ ತೋರಿಸಲು ಮೂಲ ವೀಡಿಯೊದ ಭಾಗಗಳನ್ನು ಎಡಿಟ್ ಮಾಡಲಾಗಿತ್ತು. ಆದಾಗ್ಯೂ ವಾಸ್ತವದಲ್ಲಿ ದಲ್ಲೆವಾಲ್ ಅವರು, “ರಾಮ ಮಂದಿರದ ಕಡೆಗೆ ಮೋದಿಯವರ ಗಮನ ಸಾರ್ವಕಾಲಿಕ ಎತ್ತರದಲ್ಲಿದೆ. ಯಾವುದೇ ಬೇಡಿಕೆಗೆ ಮಣಿಯದಿದ್ದರೆ ಅದು ತಮಗೆ ರಾಜಕೀಯವಾಗಿ ಹಾನಿಯನ್ನುಂಟು ಮಾಡುತ್ತದೆ ಎಂದು ಯಾವುದೇ ರಾಜಕಾರಣಿ ಭಾವಿಸಿದಾಗ ಮಾತ್ರ ಅದನ್ನು ಒಪ್ಪಿಕೊಳ್ಳುತ್ತಾನೆ. ಇಂತಹ ಪರಿಣಾಮಗಳನ್ನು ಬೀರದ ಬೇಡಿಕೆಗಳಿಗೆ ರಾಜಕಾರಣಿಗಳು ಆದ್ಯತೆ ನೀಡುವುದಿಲ್ಲ. ನಾವು ಹೇಳುತ್ತಿರುವುದು ಏನೆಂದರೆ,ಈ ಗ್ರಾಫ್ ಅನ್ನು ಹೇಗೆ ಕೆಳಕ್ಕೆ ತರಬಹುದು? ಗ್ರಾಫ್ ತುಂಬ ಹೆಚ್ಚಾಗಿದೆ ಮತ್ತು ನಮ್ಮ ಬಳಿ ಕೆಲವೇ ದಿನಗಳಿವೆ. ಗ್ರಾಫ್ ಕೆಳಕ್ಕಿಳಿಯದಿದ್ದರೆ ನಮ್ಮ ಬೇಡಿಕೆಗಳು ಈಡೇರುವುದಿಲ್ಲ” ಎಂದು ಹೇಳಿದ್ದರು.

Full View

ಮೂಲ ವೀಡಿಯೊದ ಸಂದರ್ಭವನ್ನು ತಿರುಚಲಾಗಿದೆ ಮತ್ತು ಅದರ ಕೆಲವು ಭಾಗಗಳನ್ನು ಕತ್ತರಿಸುವ ಮೂಲಕ ಎಡಿಟೆಡ್ ಕ್ಲಿಪ್ ಅನ್ನು ಸೃಷ್ಟಿಸಲಾಗಿತ್ತು. ನಂತರ ಅದನ್ನು ಯಾವುದೇ ಸಂದರ್ಭವಿಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಟಿವಿ ಚಾನೆಲ್ ಗಳಲ್ಲಿ ಪ್ರಸಾರ ಮಾಡಲಾಗಿತ್ತು. ಮೂಲ ವೀಡಿಯೊದ ಕೆಲವು ಭಾಗಗಳನ್ನು ಎಡಿಟ್ ಮಾಡುವ ಮೂಲಕ ದಲ್ಲೆವಾಲ್ ಹೇಳಿಕೆಗೆ ಬೇರೆಯೇ ಬಣ್ಣವನ್ನು ನೀಡುವ ಪ್ರಯತ್ನವು ನಡೆದಿತ್ತು ಎನ್ನುವುದು ಸ್ಪಷ್ಟವಾಗಿದೆ ಎಂದು Alt Newsನ ವಿಶ್ಲೇಷಣೆಯು ತೋರಿಸಿದೆ.

ವೈರಲ್ ಕ್ಲಿಪ್ ಬಗ್ಗೆ ಸ್ವತಃ ದಲ್ಲೆವಾಲ್ ಅವರು ಸ್ಪಷ್ಟನೆಯನ್ನು ಹೊರಡಿಸಿ, ತನ್ನ ಹೇಳಿಕೆಯನ್ನು ತಿರುಚಲಾಗಿದೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತನ್ನನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಹೇಳಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News