ಮುಸ್ಲಿಮರು ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು : ಸಚಿವ ನಿತಿನ್ ಗಡ್ಕರಿ

Update: 2025-03-17 16:25 IST
ಮುಸ್ಲಿಮರು ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು : ಸಚಿವ ನಿತಿನ್ ಗಡ್ಕರಿ

ನಿತಿನ್ ಗಡ್ಕರಿ (PTI)

  • whatsapp icon

ಹೊಸದಿಲ್ಲಿ : ಹೆಚ್ಚಿನ ಮುಸ್ಲಿಮರು ಟೀ ಸ್ಟಾಲ್‌ಗಳು, ಪಾನ್ ಅಂಗಡಿಗಳನ್ನು ನಡೆಸುತ್ತಿದ್ದಾರೆ. ಆದರೆ, ಮುಸ್ಲಿಮರು ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದು ಮೋದಿ ಸರಕಾರದ ಹಿರಿಯ ಸಚಿವ, ಬಿಜೆಪಿಯ ಮಾಜಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಹೇಳಿದರು.

ನಾಗ್ಪುರದಲ್ಲಿ ಸೆಂಟ್ರಲ್ ಇಂಡಿಯಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್‌ನ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಗಡ್ಕರಿ, ಶಿಕ್ಷಣವು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವುದಲ್ಲದೆ ಸಮಾಜದ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ವ್ಯಕ್ತಿಯ ಮಹತ್ವ ಜಾತಿ, ಮತ, ಲಿಂಗದಿಂದ ನಿರ್ಧಾರವಾಗದೆ ಅವರ ಗುಣಗಳಿಂದ ನಿರ್ಧಾರವಾಗಬೇಕು. ನನ್ನ ನಿಲುವು ಸ್ಪಷ್ಟವಾಗಿದೆ. ನಾನು ನನ್ನ ನೀತಿಯೊಂದಿಗೆ ಬದುಕುತ್ತೇನೆ, ಮತಗಳು ಬರುವುದೋ ಇಲ್ಲವೋ, ಅದನ್ನು ಪರಿಗಣಿಸುವುದಿಲ್ಲ. ಜಾತಿ ಬಗ್ಗೆ ಮಾತನಾಡುವವನಿಗೆ ಝಾಡಿಸಿ ಒದೆಯುತ್ತೇನೆ ಎಂದು ನಾನು ಒಂದು ಸಭೆಯಲ್ಲಿ ಸ್ಪಷ್ಟವಾಗಿ ಹೇಳಿದ್ದೆ. ನೀವು ಈ ನಿಲುವು ತೆಗೆದುಕೊಂಡರೆ ಮತ ಕಳೆದುಕೊಳ್ಳಬಹುದು ಎಂದು ನನ್ನ ಸ್ನೇಹಿತರು ನನಗೆ ಎಚ್ಚರಿಸಿದರು. ಆದರೆ, ನಾನು ನಾನು ನಂಬಿರುವುದನ್ನು ಪೂರ್ತಿಯಾಗಿ ಪಾಲಿಸುತ್ತೇನೆ. ಚುನಾವಣೆಯಲ್ಲಿ ಸೋತರೆ ಏನಾಗುತ್ತದೆ? ಯಾರಾದರೂ ಅದರಿಂದ ಸಾವಿಗೀಡಾಗುತ್ತಾರೆಯಾ? ಅದೇ ನನ್ನ ಪ್ರಶ್ನೆ ಎಂದು ಗಡ್ಕರಿ ಹೇಳಿದರು.

ನಮ್ಮ ಸಮಾಜದಲ್ಲಿ ಶಿಕ್ಷಣ ಅತ್ಯಗತ್ಯವಾಗಿರುವ ಸಮುದಾಯವೆಂದರೆ ಮುಸ್ಲಿಮರು. ಇವರು ಇಂಜಿನಿಯರ್, ವೈದ್ಯ, ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಾಗಬೇಕು. ನಾವು ಮಸೀದಿಯಲ್ಲಿ ಪ್ರಾರ್ಥನೆಗಳನ್ನು ಮಾಡಿದರೂ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸ್ವೀಕರಿಸದಿದ್ದರೆ ಭವಿಷ್ಯ ಹೇಗಿರುತ್ತದೆ? ಎಂದು ಗಡ್ಕರಿ ಪ್ರಶ್ನಿಸಿದರು. ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ಉಲ್ಲೇಖಿಸಿ ಶಿಕ್ಷಣದ ಮೂಲಕ ಸಮುದಾಯದ ಅಭಿವೃದ್ಧಿಯನ್ನು ಹೇಗೆ ಸಾಧಿಸಬಹುದು ಎಂಬುದನ್ನು ವಿವರಿಸಿದರು.

ನಾನು ತಾಂತ್ರಿಕ ಶಿಕ್ಷಣ ಪಡೆದಿಲ್ಲ, ಆದರೆ ನನ್ನ ಹೆಸರು ವಿಶ್ವ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. 12 ಡಿ.ಲಿಟ್ ಪದವಿಗಳನ್ನು ಹೊಂದಿದ್ದರೂ, ನಾನು ನನ್ನ ಹೆಸರಿನ ಮೊದಲು ಡಾಕ್ಟರ್ ಎಂದು ಬಳಸುವುದಿಲ್ಲ. ನಾನು ವ್ಯವಹಾರ ನಿರ್ವಹಣಾ ಮತ್ತು ಕೃಷಿ ವಿಜ್ಞಾನದಲ್ಲಿ ಶಿಕ್ಷಣ ಪಡೆದಿದ್ದೇನೆ. ಆದರೆ, ನನ್ನ ಸಾಧನೆಗಳು ವಿವಿಧ ಕ್ಷೇತ್ರಗಳಲ್ಲಿ ದಾಖಲೆಗಳನ್ನು ನಿರ್ಮಾಣ ಮಾಡಿವೆ. ಜಾತಿ ಆಧರಿತ ರಾಜಕಾರಣ ದೇಶದ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ. ನಾನು ಚುನಾವಣಾ ರಾಜಕೀಯಕ್ಕೆ ಸಂಬಂಧಿಸಿದಂತೆ ಯಾವತ್ತೂ ಜಾತಿಯನ್ನು ಪರಿಗಣಿಸಿಲ್ಲ. ನಾನು ಯಾವಾಗಲೂ ನನ್ನ ತತ್ವಗಳೊಂದಿಗೆ ಜೀವನವನ್ನು ನಡೆಸುತ್ತೇನೆ. ಜ್ಞಾನವು ಶಕ್ತಿಯಾಗಿದೆ. ಇದನ್ನು ಸ್ವೀಕರಿಸುವುದು ನಿಮ್ಮ ಗುರಿಯಾಗಬೇಕು ಎಂದು ಗಡ್ಕರಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News