140 ಕೋಟಿ ಜನರಲ್ಲಿ 3 ಸಾವಿರ ಮಂದಿಗೆ ಕರೆ ಮಾಡಿ ಜಾಗತಿಕ ಹಸಿವು ಸೂಚ್ಯಂಕ ವರದಿ ತಯಾರಿ ಮಾಡಲಾಗುತ್ತದೆ ಎಂದ ಸ್ಮೃತಿ ಇರಾನಿ

Update: 2023-10-21 11:09 GMT

ಕೇಂದ್ರ ಸಚಿವೆ ಸ್ಮೃತಿ ಇರಾನಿ (Photo:PTI)

ಹೊಸದಿಲ್ಲಿ: ಜಾಗತಿಕ ಹಸಿವಿನ ಸೂಚ್ಯಂಕದ ವಿಶ್ವಾಸಾರ್ಹತೆಯನ್ನು ತಳ್ಳಿಹಾಕಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಹೇಳಿಕೆಗಳ ವಿರುದ್ಧ ವಿಪಕ್ಷಗಳು ತೀವ್ರವಾಗಿ ಹರಿಹಾಯ್ದಿದ್ದು, ಸಚಿವೆಯ ಅಜ್ಞಾನವನ್ನು ಟೀಕಿಸಿದೆ.

140 ಕೋಟಿ ಜನರಲ್ಲಿ 3,000 ಜನರಿಗೆ ಕರೆ ಮಾಡಿ ಅವರಿಗೆ ಹಸಿವಾಗಿದೆಯೇ ಎಂದು ಕೇಳುವ ಮೂಲಕ ಜಾಗತಿಕ ಹಸಿವು ಸೂಚ್ಯಂಕವನ್ನು (ಜಿಎಚ್‌ಐ) ಲೆಕ್ಕ ಹಾಕಲಾಗುತ್ತದೆ. ಈ ವರದಿಯಲ್ಲಿ ಭಾರತಕ್ಕಿಂತ ಪಾಕಿಸ್ತಾನ ಉತ್ತಮ ಸ್ಥಿತಿಯಲ್ಲಿದೆ ಎನ್ನಲಾಗಿದೆ, ಇದನ್ನು ಯಾರಾದರೂ ನಂಬುತ್ತಾರೆಯೇ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಇರಾನಿ ಅವರು ಹೇಳಿದ್ದರು.

ಶುಕ್ರವಾರ ಹೈದರಾಬಾದ್‌ನಲ್ಲಿ ನಡೆದ ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ (ಎಫ್‌ಐಸಿಸಿಐ) ಸಮ್ಮೇಳನದಲ್ಲಿ ಮಾತನಾಡುತ್ತಾ ಸ್ಮೃತಿ ಇರಾನಿ ಅವರು ಜಾಗತಿಕ ಹಸಿವು ಸೂಚ್ಯಂಕದ ಬಗ್ಗೆ ತಮ್ಮ ಟೀಕೆಗಳನ್ನು ಮಾಡಿದ್ದರು.

ಇರಾನಿ ವಿಡಿಯೋವನ್ನು ಹಂಚಿಕೊಂಡಿರುವ ಕಾಂಗ್ರೆಸ್‌ ನಾಯಕಿ ಸುಪ್ರಿಯಾ ಶ್ರಿನೇಟ್ ಅವರು, “ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಏನೆಂದು ನನಗೆ ತಿಳಿದಿಲ್ಲ, ನಿಮ್ಮ ಅಜ್ಞಾನದ ಮಟ್ಟ ಅಥವಾ ನಿಮ್ಮ ಸಂವೇದನಾಶೂನ್ಯತೆಯನ್ನು ನೀವು ಇಲ್ಲಿ ಪ್ರದರ್ಶಿಸಿದ್ದೀರಾ? ಜನರಿಗೆ ಕರೆ ಮಾಡಿ ಅವರಿಗೆ ಹಸಿವಾಗಿದೆಯೇ ಎಂದು ಕೇಳುವ ಮೂಲಕ ಜಾಗತಿಕ ಹಸಿವು ಸೂಚ್ಯಂಕವನ್ನು ಲೆಕ್ಕಹಾಕಲಾಗಿದೆ ಎಂದು ನೀವು ಪ್ರಾಮಾಣಿಕವಾಗಿ ಭಾವಿಸುತ್ತೀರಾ !!???” ಎಂದು ಪ್ರಶ್ನಿಸಿದ್ದಾರೆ.

“ನೀವು ಭಾರತ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾಗಿದ್ದೀರಿ ಎಂದು ಕೇಳಲು ಭಯಾನಕವಾಗಿದೆ!” ಎಂದು ಹೇಳಿದ ಅವರು, ಒಂದು ದೇಶದ ಜಾಗತಿಕ ಹಸಿವಿನ ಸೂಚ್ಯಂಕಕ್ಕೆ ಆಧರಿಸಿದ ನಾಲ್ಕು ಅಂಶಗಳ ಬಗ್ಗೆ ವಿವರಿಸಿದ್ದಾರೆ.

ಅಪೌಷ್ಟಿಕತೆ, ಮಕ್ಕಳ ಬೆಳವಣಿಗೆ ಕುಂಠಿತ, ಮಕ್ಕಳ ಕ್ಷೀಣತೆ ಮತ್ತು ಮಕ್ಕಳ ಮರಣ ಎಂಬ ನಾಲ್ಕು ಅಂಶಗಳ ಅರ್ಥವನ್ನು ವಿವರವಾಗಿ ಬರೆದಿದ್ದಾರೆ. ಅಲ್ಲದೆ, ಭಾರತ ಸರ್ಕಾರದ ಮಂತ್ರಿಯಾಗಿರುವ ಪ್ರಭಾವಿ ಮಹಿಳೆಯಾದ ನೀವು ಹಸಿವಿನ ಬಗ್ಗೆ ಅಪಹಾಸ್ಯ ಮಾಡಬೇಡಿ ಎಂದು ಸುಪ್ರಿಯಾ ಅವರು ತಮ್ಮ ಟ್ವೀಟ್‌ನಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News