ಪಾಕ್ ನೊಂದಿಗಿನ ಸಿಂಧೂ ಜಲ ಒಪ್ಪಂದ ಅಮಾನತು: ನೀರನ್ನು ನಾವು ಶೇಖರಿಸಿಟ್ಟುಕೊಳ್ಳುವುದೆಲ್ಲಿ? ಎಂದು ಪ್ರಶ್ನಿಸಿದ ಸಂಸದ ಉವೈಸಿ

ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿರುದ್ಧ ಬಲಿಷ್ಠ ಹಾಗೂ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ, ಪಾಕಿಸ್ತಾನದೊಂದಿಗಿನ ಸಿಂಧೂ ನದಿ ಜಲ ಒಪ್ಪಂದವನ್ನು ಅಮಾನತಿನಲ್ಲಿರಿಸುವ ಕೇಂದ್ರ ಸರಕಾರದ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ.
ಗುರುವಾರ ಹೊಸದಿಲ್ಲಿಯಲ್ಲಿ ಕೇಂದ್ರ ಸರಕಾರ ಆಯೋಜಿಸಿದ್ದ ಸರ್ವಪಕ್ಷಗಳ ಸಭೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಸದುದ್ದೀನ್ ಉವೈಸಿ, ಭದ್ರತಾ ಸಂಪುಟ ಸಮಿತಿ ಕೈಗೊಂಡಿರುವ ನಿರ್ಧಾರಗಳನ್ನು ಸ್ವಾಗತಿಸಿದ್ದಾರೆ. ಇದೇ ವೇಳೆ ಭಯೋತ್ಪಾದನಾ ಸಂಘಟನೆಗಳಿಗೆ ಆಶ್ರಯ ನೀಡಿರುವ ದೇಶವೊಂದರ ಮೇಲೆ ಕ್ರಮ ಕೈಗೊಳ್ಳಲು ಸರಕಾರ ಹಿಂಜರಿಯಕೂಡದು ಎಂದೂ ಆಗ್ರಹಿಸಿದ್ದಾರೆ.
1960ರ ಸಿಂಧೂ ನದಿ ಜಲ ಒಪ್ಪಂದವನ್ನು ಅಮಾನತುಗೊಳಿಸುವ ಸರಕಾರದ ನಿರ್ಧಾರದ ಕುರಿತು ಪ್ರತಿಕ್ರಿಯಿಸಿದ ಉವೈಸಿ, ಈ ದಿಟ್ಟ ಕ್ರಮವನ್ನು ಸ್ವಾಗತಿಸಿದರಾದರೂ, ಈ ನೀರನ್ನು ಸರಕಾರ ಎಲ್ಲಿ ಶೇಖರಿಸಿಡಲಿದೆ ಎಂದೂ ಪ್ರಶ್ನಿಸಿದರು.
"ಸಿಂಧೂ ನದಿ ಜಲ ಒಪ್ಪಂದ ಅಮಾನತುಗೊಂಡಿರುವುದು ತುಂಬಾ ಒಳ್ಳೆಯದು. ಆದರೆ, ನೀರನ್ನು ಎಲ್ಲಿ ಶೇಖರಿಸಿಡುವುದು? ಕೇಂದ್ರ ಸರಕಾರ ಏನೆಲ್ಲ ನಿರ್ಧಾರ ತೆಗೆದುಕೊಳ್ಳುತ್ತದೊ, ಆ ಎಲ್ಲ ನಿರ್ಧಾರಗಳನ್ನು ನಾವು ಬೆಂಬಲಿಸುತ್ತೇವೆ. ಇದು ರಾಜಕೀಯ ವಿಷಯವಲ್ಲ" ಎಂದು ಅವರು ಘೋಷಿಸಿದ್ದಾರೆ.