ಪಹಲ್ಗಾಮ್ ಉಗ್ರರ ದಾಳಿ ಹಿನ್ನೆಲೆ: ಪ್ರಧಾನಿ, ನಿರ್ಮಲಾ ವಿದೇಶ ಪ್ರವಾಸ ಮೊಟಕು

PC: x.com/ani_digital
ಜಮ್ಮು: ಅನಂತನಾಗ್ ಜಿಲ್ಲೆಯ ಬೈಸರನ್ ಕಣಿವೆ ಪ್ರದೇಶದಲ್ಲಿ ಪ್ರವಾಸಿಗಳ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ 28 ಮಂದಿ ಮೃತಪಟ್ಟ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ವಿದೇಶ ಪ್ರವಾಸಗಳನ್ನು ಮೊಟಕುಗೊಳಿಸಿ ಸ್ವದೇಶಕ್ಕೆ ವಾಪಸ್ಸಾಗಿದ್ದಾರೆ.
ಸೌದಿ ಅರೇಬಿಯಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜತೆ ಮಾತನಾಡಿ, ಅಗತ್ಯ ಕ್ರಮ ಕೈಗೊಳ್ಳುವಂತೆಸೂಚಿಸಿದರು. ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ ಅಮಿತ್ ಶಾ ಅವರು ಸಿಎಂ ಒಮರ್ ಅಬ್ದುಲ್ಲಾ ಅವರ ಜತೆ ಉನ್ನತ ಮಟ್ಟದ ಸಭೆ ನಡೆಸಿದರು.
ಈ ಮಧ್ಯೆ ಸೌದಿ ಸರ್ಕಾರ ಆಯೋಜಿಸಿದ್ದ ಅಧಿಕೃತ ಔತಣಕೂಟದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿಲ್ಲ. ಸರ್ಕಾರಿ ಮೂಲಗಳ ಪ್ರಕಾರ ಮೋದಿ ರಾತ್ರಿ 2 ಗಂಟೆ ವೇಳೆಗೆ ಜಿದ್ದಾದಿಂದ ಭಾರತಕ್ಕೆ ಪ್ರಯಾಣ ಬೆಳೆಸಿದ್ದು, ಬುಧವಾರ ಮುಂಜಾನೆ ಅಂದರೆ ನಿಗದಿತ ವೇಳಾಪಟ್ಟಿಗಿಂತ ಒಂದು ದಿನ ಮೊದಲೇ ಭಾರತ ತಲುಪಿದ್ದಾರೆ.
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಅಮೆರಿಕ ಮತ್ತು ಪೆರು ಪ್ರವಾಸ ಮೊಟಕುಗೊಳಿಸಿದ್ದಾರೆ. ಮೊಟ್ಟಮೊದಲು ಲಭ್ಯವಾಗುವ ವಿಮಾನದಲ್ಲಿ ಅವರು ಭಾರತಕ್ಕೆ ಮರಳಿ, ಸಂಕಷ್ಟ ಹಾಗೂ ದುರಂತದ ಸಂದರ್ಭದಲ್ಲಿ ಜನತೆಯ ಜತೆಗೆ ಇರಲಿದ್ದಾರೆ ಎಂದು ಎಕ್ಸ್ ಪೋಸ್ಟ್ನಲ್ಲಿ ವಿವರಿಸಲಾಗಿದೆ.
ಉಗ್ರರ ದಾಳಿಗೆ ಜಾಗತಿಕ ಮಟ್ಟದಲ್ಲಿ ಸಾರ್ವತ್ರಿಕ ಖಂಡನೆ ವ್ಯಕ್ತವಾಗಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗುಟೆರಸ್, ಜರ್ಮನ್ ಚಾನ್ಸಲರ್ ಒಲಾಫ್ ಶೋಲ್ಝ್ ಸೇರಿದಂತೆ ಹಲವು ಮಂದಿ ಗಣ್ಯರು ಘಟನೆಯನ್ನು ಖಂಡಿಸಿದ್ದಾರೆ.