ಪಾಕಿಸ್ತಾನದ ಗಡಿ ಕಾರ್ಯಾಚರಣೆ ಪಡೆ ದಾಳಿ: ಜುಲೈನಲ್ಲಿ ಭಾರತೀಯ ಸೇನೆಯ 12ನೇ ಸೈನಿಕ ಹುತಾತ್ಮ
ಶ್ರೀನಗರ: ಪಾಕಿಸ್ತಾನದ ಗಡಿ ಕಾರ್ಯಾಚರಣೆ ಪಡೆ (ಬಿಎಟಿ) ಶನಿವಾರ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ರೈಫಲ್ ಮ್ಯಾನ್ ಮೋಹಿತ್ ರಾಥೋಡ್ ಹತ್ಯೆಯಾಗಿದ್ದಾರೆ. ದಾಳಿಯಲ್ಲಿ ಮೇಜರ್ ಸೇರಿದಂತೆ ಮೂರು ಮಂದಿಗೆ ಗಾಯಗಳಾಗಿವೆ. ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಮಚಾಲ್ ಪ್ರದೇಶದ ಕಾಮಕಾರಿ ಗಡಿರೇಖೆಯಲ್ಲಿ ನುಸುಳಲು ಯತ್ನಿಸುತ್ತಿದ್ದ ಉಗ್ರಗಾಮಿಗಳ ವಿರುದ್ಧ ಕಾರ್ಯಾಚರಣೆ ಕೈಗೊಳ್ಳುತ್ತಿದ್ದ ವೇಳೆ ಈ ದಾಳಿ ನಡೆದಿದೆ. ಭಾರತೀಯ ಸೈನಿಕರು ನಡೆಸಿದ ಪ್ರತಿದಾಳಿಯಲ್ಲಿ ಪಾಕಿಸ್ತಾನಿ ನುಸುಳುಕೋರನೊಬ್ಬ ಹತ್ಯೆಗೀಡಾಗಿದ್ದಾನೆ.
ಈ ದಾಳಿಯೊಂದಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ತಿಂಗಳಲ್ಲಿ ಉಗ್ರರ ದಾಳಿಗೆ ಬಲಿಯಾದ ಸೈನಿಕರ ಸಂಖ್ಯೆ 12ಕ್ಕೇರಿದಂತಾಗಿದೆ. ಇದಕ್ಕೂ ಮುನ್ನ ನಾಯ್ಕ್ ದಿಲ್ವಾರ್ ಖಾನ್ ಜುಲೈ 24ರಂದು, ಲ್ಯಾನ್ಸ್ ನಾಯ್ಕ್ ಸುಭಾಷ್ ಚಂದ್ರ ಜುಲೈ 23ರಂದು ಹತ್ಯೆಗೀಡಾಗಿದ್ದರು. ಜುಲೈ 15ರಂದು 10 ರಾಷ್ಟ್ರೀಯ ರೈಫಲ್ಸ್ ನ ಕ್ಯಾಪ್ಟನ್ ಮತ್ತು ಮೂವರು ಸೈನಿಕರು ದೋಡಾ ಜಿಲ್ಲೆಯಲ್ಲಿ ಹತ್ಯೆಗೀಡಾಗಿದ್ದರು. ಜುಲೈ 8ರಂದು ಗಸ್ತು ತಿರುಗುತ್ತಿದ್ದ ಸೇನಾ ವಾಹನದ ಮೇಲೆ ನಡೆದ ದಾಳಿಯಲ್ಲಿ 22 ಗರ್ವಾಲ್ ರೈಫಲ್ಸ್ ನ ಐವರು ಸೈನಿಕರು ಹತರಾಗಿದ್ದರು.
ಪಾಕಿಸ್ತಾನದ ಗಡಿ ಕಾರ್ಯಾಚರಣೆ ಪಡೆಯಲ್ಲಿ ಪಾಕಿಸ್ತಾನಿ ಸೈನಿಕರು ಮತ್ತು ಉಗ್ರರು ಸೇರಿದ್ದು, ಬಿಗಿ ಬಂದೋಬಸ್ತ್ ಇರುವ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನಿ ಉಗ್ರರು ಭಾರತದ ಗಡಿಯೊಳಕ್ಕೆ ನುಸುಳಲು ಅಲ್ಲಿನ ಸೇನೆ ರಕ್ಷಣೆ ನೀಡುತ್ತಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.