ಪಹಲ್ಗಾಮ್ ದಾಳಿ: ಪಾಕಿಸ್ತಾನದ ಯೂಟ್ಯೂಬ್ ಚಾನೆಲ್ ಗಳಿಗೆ ಭಾರತದಲ್ಲಿ ನಿರ್ಬಂಧ

ಹೊಸದಿಲ್ಲಿ: 26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತ ಸರ್ಕಾರ, ಸೇನೆಯ ವಿರುದ್ಧ ಪ್ರಚೋದನಕಾರಿ, ಕೋಮು ಸೂಕ್ಷ್ಮ ವಿಷಯ ಮತ್ತು ಸುಳ್ಳು ನಿರೂಪಣೆಗಳನ್ನು ಹರಡಿದ್ದಕ್ಕಾಗಿ ಭಾರತವು 16 ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಿದೆ ಎಂದು ಮೂಲಗಳು ತಿಳಿಸಿವೆ.
ಇದರ ಜೊತೆಗೆ, 3.5 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿರುವ ಶುಐಬ್ ಅಖ್ತರ್ ಅವರ ಯೂಟ್ಯೂಬ್ ಚಾನೆಲ್ ಅನ್ನೂ ನಿಷೇಧಿಸಲಾಗಿದೆ.
ನಿಷೇಧಿತ ಯೂಟ್ಯೂಬ್ ಚಾನೆಲ್ ಗಳು ಸುಮಾರು 63 ಮಿಲಿಯನ್ ಚಂದಾದಾರರನ್ನು ಹೊಂದಿತ್ತು.
ಡಾನ್ ನ್ಯೂಸ್, ಸಮಾ ಟಿವಿ, ಎಆರ್‌ವೈ ನ್ಯೂಸ್, ಬೋಲ್ ನ್ಯೂಸ್, ರಫ್ತಾರ್, ಜಿಯೋ ನ್ಯೂಸ್ ಮತ್ತು ಸುನೋ ನ್ಯೂಸ್‌ನಂತಹ ಪ್ರಮುಖ ಪಾಕಿಸ್ತಾನಿ ಸುದ್ದಿ ಚಾನೆಲ್‌ಗಳು ನಿಷೇಧಿತ ಪಟ್ಟಿಯಲ್ಲಿ ಸೇರಿವೆ.
ಇರ್ಷಾದ್ ಭಟ್ಟಿ, ಅಸ್ಮಾ ಶಿರಾಜಿ, ಉಮರ್ ಚೀಮಾ ಮತ್ತು ಮುನೀಬ್ ಫಾರೂಕ್ ರಂತಹ ಪತ್ರಕರ್ತರು ನಡೆಸುತ್ತಿರುವ ಯೂಟ್ಯೂಬ್ ಚಾನೆಲ್‌ಗಳನ್ನೂ ಭಾರತೀಯ ಬಳಕೆದಾರರಿಗಾಗಿ ನಿರ್ಬಂಧಿಸಲಾಗಿದೆ.
ದಿ ಪಾಕಿಸ್ತಾನ್ ರೆಫರೆನ್ಸ್, ಸಮಾ ಸ್ಪೋರ್ಟ್ಸ್, ಉಜೈರ್ ಕ್ರಿಕೆಟ್ ಮತ್ತು ರಾಜಿ ನಾಮಾ ಚಾನೆಲ್ ಗಳನ್ನೂ ನಿಷೇಧಿಸಲಾಗಿದೆ.
ಎಪ್ರಿಲ್ 22 ರಂದು 25 ಪ್ರವಾಸಿಗರು ಮತ್ತು ಸ್ಥಳೀಯ ಕಾಶ್ಮೀರಿಯೊಬ್ಬರು ಕ್ರೂರವಾಗಿ ಬಲಿಯಾದ ಪಹಲ್ಗಾಮ್ ದಾಳಿಯ ನಂತರ, ಈ ಚಾನೆಲ್‌ಗಳು ತಪ್ಪು ಮಾಹಿತಿ, ಸುಳ್ಳು ನಿರೂಪಣೆಗಳು ಮತ್ತು ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುತ್ತಿವೆ ಎಂದು ಕಂಡುಬಂದ ನಂತರ ಗೃಹ ಸಚಿವಾಲಯದ ಶಿಫಾರಸುಗಳ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.