ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವ ಮೋದಿಯವರ ಭಾಷಣದ ತುಣುಕುಗಳು ಅವರ ವೆಬ್ಸೈಟ್ ನಿಂದ ಮಾಯ!

Update: 2024-04-22 17:43 GMT

narendramodi.in ಸೈಟ್‌ನ ಸ್ಕ್ರೀನ್‌ಗ್ರಾಬ್

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 21 ರಂದು ರವಿವಾರ ರಾಜಸ್ಥಾನದ ಬುಡಕಟ್ಟು ಜನಾಂಗದ ಜನರೇ ಹೆಚ್ಚಾಗಿ ವಾಸಿಸುವ ಭನ್ಸ್ವಾರಾದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮತ ಯಾಚಿಸಿದ್ದರು. ಈ ಸಂದರ್ಭ ಅವರು ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಜನರ ಸಂಪತ್ತನ್ನು ಮುಸ್ಲಿಮರಿಗೆ ಮರುಹಂಚಿಕೆ ಮಾಡಲಿದೆ ಎಂದು ಹೇಳಿದ್ದರು. ಅಲ್ಲದೇ ಮುಸ್ಲಿಂ ಸಮುದಾಯವನ್ನು "ಹೆಚ್ಚು ಮಕ್ಕಳನ್ನು ಹೊಂದಿರುವವರು" ಎಂದು ಹೇಳಿದ್ದರು.

ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಭಾಷಣವಾಗಿತ್ತು.

ಮತದಾರರನ್ನು ಗೊಂದಲಕ್ಕೀಡು ಮಾಡುವ ಉದ್ದೇಶಪೂರ್ವಕ ಪ್ರಯತ್ನದಲ್ಲಿ, ಮೋದಿ ಅವರು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಮಾಡಿದ್ದ ಭಾಷಣವನ್ನು ತಪ್ಪಾಗಿ ಉಲ್ಲೇಖಿಸಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದರೆ, ಆದಿವಾಸಿಗಳಿಗೆ ಸೇರಿದ್ದನ್ನು ನುಸುಳುಕೋರರಿಗೆ ಹಂಚಿಕೆ ಮಾಡಲಿದೆ ಎಂದರು. ಅಲ್ಪಸಂಖ್ಯಾತ ಸಮುದಾಯವನ್ನು ಸೂಚಿಸಲು ಬಿಜೆಪಿಯು ನುಸುಳುಕೋರರು ಎಂಬ ಪದ ಬಳಸುತ್ತಿದೆ.

ವಿಶೇಷವೆಂದರೆ, ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಈ ಭಾಷಣದ ತುಣುಕುಗಳನ್ನು ಅವರ ವೈಯಕ್ತಿಕ ವೆಬ್‌ಸೈಟ್ www.narendramodi.in ನಲ್ಲಿ ಇಂಗ್ಲಿಷ್‌ ವಿಭಾಗದಿಂದ ಕಾಣೆಯಾಗಿದೆ!

ಪ್ರಧಾನಿಯ ಭಾಷಣವನ್ನು 'ರಾಜಸ್ಥಾನದ ಜಲೋರ್ ಮತ್ತು ಭನ್ಸ್ವಾರಾದಲ್ಲಿ ಸಾರ್ವಜನಿಕ ಸಭೆಗಳಲ್ಲಿನ ಶಕ್ತಿಶಾಲಿ ಭಾಷಣಗಳು' ಎಂಬ ಶೀರ್ಷಿಕೆಯಡಿಯಲ್ಲಿ ದಾಖಲಿಸಲಾಗಿದೆ. ಭಾಷಣಗಳ ಇಂಗ್ಲಿಷ್ ಸಾರಾಂಶವು ಪ್ರಚೋದನಕಾರಿ ಕೊನೆಯ ಭಾಗವನ್ನು ಹೊಂದಿದ್ದರೂ, ಪ್ರಧಾನಿ ಬಳಸಿದ 'ನುಸುಳುಕೋರರು', 'ಮುಸ್ಲಿಮ್‌ʼಗಳಂತಹ ಪದಗಳನ್ನು ಹಾಗೂ 'ಹೆಚ್ಚು ಮಕ್ಕಳನ್ನು ಹೊಂದಿರುವವರು' ಮುಂತಾದ ಪದಪುಂಜಗಳನ್ನು ತೆಗೆದು ಹಾಕಿದೆ. ಕಾಂಗ್ರೆಸ್ ನಮ್ಮ ತಾಯಂದಿರು ಮತ್ತು ಸಹೋದರಿಯರ ಮಂಗಳಸೂತ್ರವನ್ನು ಕಸಿದುಕೊಂಡು ಮುಸ್ಲಿಂ ಸಮುದಾಯಕ್ಕೆ ನೀಡಲಿದೆ ಎಂದು ಅವರು ಹೇಳಿರುವುದನ್ನೂ ಈ ಸಾರಂಶವು ಉಲ್ಲೇಖಿಸಿಲ್ಲ.

“ಭನ್ಸ್ವಾರಾದಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ ತೀವ್ರವಾಗಿ ಟೀಕಿಸಿದ ಪ್ರಧಾನಿ ಮೋದಿ, 'ಕಾಂಗ್ರೆಸ್ ಎಡಪಂಥೀಯರು ಮತ್ತು ನಗರ ನಕ್ಸಲರ ಕಪಿಮುಷ್ಠಿಯಲ್ಲಿ ಸಿಕ್ಕಿಹಾಕಿಕೊಂಡಿದೆ (ಬಿಜೆಪಿಯು ತನ್ನ ಹಿಂದುತ್ವ ಸಿದ್ಧಾಂತವನ್ನು ವಿರೋಧಿಸುವವರನ್ನು ದೇಶದ ವಿರುದ್ಧ ದಂಗೆಯೆದ್ದವರು ಎಂದು ದೂಷಿಸಲು ಈ ಪದವನ್ನು ಸೃಷ್ಟಿಸಿದೆ). ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿರುವುದು ಬಹಳ ಗಂಭೀರ ಮತ್ತು ಆತಂಕಕಾರಿಯಾದುದು. ಅವರು ಸರ್ಕಾರ ರಚಿಸಿದರೆ ಪ್ರತಿಯೊಬ್ಬ ವ್ಯಕ್ತಿಗೆ ಸೇರಿದ ಆಸ್ತಿಯ ಸಮೀಕ್ಷೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಅದರರ್ಥ ನಮ್ಮ ಸಹೋದರಿಯರು ಎಷ್ಟು ಚಿನ್ನ ಹೊಂದಿದ್ದಾರೆ, ಸರ್ಕಾರಿ ನೌಕರರು ಎಷ್ಟು ಹಣ ಹೊಂದಿದ್ದಾರೆ ಎಂಬುದನ್ನು ಪರಿಶೀಲಿಸುವುದು. ನಮ್ಮ ಸಹೋದರಿಯರ ಚಿನ್ನಾಭರಣಗಳನ್ನು ಸಮಾನವಾಗಿ ವಿತರಿಸಲಾಗುವುದು ಎಂದು ಅವರು ಹೇಳಿದ್ದಾರೆ. ನಮ್ಮ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವ ಹಕ್ಕು ಸರ್ಕಾರಕ್ಕೆ ಇದೆಯೇ?” ಎಂದು ವೆಬ್ ಸೈಟ್ ನ ಸಾರಾಂಶವು ಈ ಭಾಗವನ್ನು ದಾಖಲಿಸುತ್ತದೆ.

ಪ್ರಧಾನಿಯ ಪ್ರಚಾರ ಮಾಧ್ಯಮವಾಗಿ ಕಾರ್ಯನಿರ್ವಹಿಸುವ ಈ ವೆಬ್ ಸೈಟ್ ಮೋದಿ ಭಕ್ತರಿಗೆ ಅವರನ್ನು ಪ್ರಬಲ ನಾಯಕನಾಗಿ ಬಿಂಬಿಸಲು ಸುದ್ದಿಗಳನ್ನು ಬಳಸುತ್ತದೆ. ಇದರಲ್ಲಿ ಮೋದಿಯವರು ಹಿಂದಿಯಲ್ಲಿ ಮಾಡಿದ ವಿವಾದಾತ್ಮಕ ಭಾಷಣಗಳ ವಿಡಿಯೋಗಳನ್ನೂ ಅಪ್ಲೋಡ್ ಮಾಡಲಾಗಿದೆ. ಜಾಲೋರ್‌ನಲ್ಲಿ ಮೋದಿ ಭಾಷಣದ ಪೂರ್ಣ ಹಿಂದಿ ಪಠ್ಯ ವೆಬ್‌ಸೈಟ್‌ನಲ್ಲಿದ್ದರೂ, ಅವರ ಬಾನ್ಸವಾಡ ಭಾಷಣದ ಪಠ್ಯ ಮಾತ್ರ ಸ್ಪಷ್ಟವಾಗಿ ಕಾಣೆಯಾಗಿದೆ. ವೆಬ್ ಸೈಟ್‌ಗೆ ಭೇಟಿ ನೀಡುವ ಕೇವಲ ಇಂಗ್ಲಿಷ್‌ ಬಲ್ಲವರು ಪ್ರಧಾನಿ ಮಾಡಿದ ದ್ವೇಷ ಭಾಷಣ ಅರಿಯದೆ ಹೋದರೂ, ಹಿಂದಿ ಅರಿತಿರುವವರು ವೀಡಿಯೊ ಕ್ಲಿಕ್ ಮಾಡಿ ಪ್ರಧಾನಿಯ ಪೂರ್ಣ ಮಾತುಗಳನ್ನು ಸ್ಪಷ್ಟವಾಗಿ ಕೇಳಿಕೊಳ್ಳಬಹುದು.

ಏಪ್ರಿಲ್ 22ರ ಮಧ್ಯಾಹ್ನದವರೆಗೂ ಮೋದಿಯವರ ವಾಟ್ಸಾಪ್ ಚಾನೆಲ್ ನಲ್ಲೂ ಅವರ ಭಾಷಣವನ್ನು ಅಪ್‌ಲೋಡ್ ಮಾಡಿರಲಿಲ್ಲ.

ಏಕೆಂದರೆ ಮೋದಿಯವರು ಪ್ರಧಾನಿಯಾದಾಗಿನಿಂದ ಇಲ್ಲಿಯವರೆಗೆ ಹಿಂದೂಗಳ ಮತಗಳನ್ನು ಸೆಳೆಯಲು ತಮ್ಮ ಚುನಾವಣಾ ಭಾಷಣಗಳಲ್ಲಿ ನೇರವಾಗಿ ಮುಸ್ಲಿಂ ಸಮುದಾಯವನ್ನು ಉಲ್ಲೇಖಿಸಿರಲಿಲ್ಲ. ಈಗ ಉಲ್ಲೇಖಿಸಿರುವ ಈ ಭಾಷಣ ರಾಜಕೀಯ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಆದರೆ ಭಾರತದ ಚುನಾವಣಾ ಆಯೋಗವು ಈ ವಿಷಯದಲ್ಲಿ ಮೌನವಾಗಿದೆ.

ಈ ಮಾರ್ಚ್‌ನಲ್ಲಿ, ಮೋದಿ ಸರ್ಕಾರವು ಇತ್ತೀಚಿನವರೆಗೂ ಬಿಜೆಪಿ ಸರ್ಕಾರದ ಕೆಲವು ಪ್ರಮುಖ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ನಿಕಟವಾಗಿ ತೊಡಗಿಸಿಕೊಂಡಿದ್ದ ಇಬ್ಬರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಿತ್ತು.

ಸೌಜನ್ಯ : thewire.in

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News