ಜಮ್ಮುಕಾಶ್ಮೀರ: ಸಹೋದ್ಯೋಗಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್
ಜಮ್ಮು: ಪೊಲೀಸ್ ಕಾನ್‌ಸ್ಟೇಬಲ್ ಓರ್ವ ತನ್ನ ಸಹೋದ್ಯೋಗಿಯನ್ನು ಎಕೆ ಅಸಾಲ್ಟ್ ರೈಫಲ್‌ನಿಂದ ಗುಂಡಿಕ್ಕಿ ಕೊಂದು ಬಳಿಕ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರವಿವಾರ ಬೆಳಗಿನ ಜಾವ ಜಮ್ಮುಕಾಶ್ಮೀರದ ಉಧಮಪುರ ಜಿಲ್ಲೆಯಲ್ಲಿ ನಡೆದಿದೆ.
ಘಟನೆ ಸಂಭವಿಸಿದಾಗ ಈ ಇಬ್ಬರು ಪೋಲಿಸರು ತಮ್ಮ ಇನ್ನೋರ್ವ ಸಹೋದ್ಯೋಗಿಯೊಂದಿಗೆ ಉತ್ತರ ಕಾಶ್ಮೀರದ ಸೋಪೋರ್‌ನಿಂದ ಜಮ್ಮು ಪ್ರದೇಶದ ರಿಯಾಸಿ ಜಿಲ್ಲೆಯ ತಲ್ವಾರಾದಲ್ಲಿನ ತರಬೇತಿ ಕೇಂದ್ರಕ್ಕೆ ಪ್ರಯಾಣಿಸುತ್ತಿದ್ದರು.
ಬೆಳಿಗ್ಗೆ 6:30ರ ಸುಮಾರಿಗೆ ಉಧಮಪುರದ ಕಾಳಿ ಮಾತಾ ದೇವಸ್ಥಾನದ ಬಳಿ ಪೋಲಿಸ್ ವಾಹನದಲ್ಲಿ ಗುಂಡುಗಳ ಗಾಯಗಳಿದ್ದ ಇಬ್ಬರು ಪೋಲಿಸರ ಶವಗಳು ಪತ್ತೆಯಾಗಿದ್ದವು.
ವಾಗ್ವಾದದ ಬಳಿಕ ಹೆಡ್ ಕಾನ್‌ಸ್ಟೇಬಲ್ ವ್ಯಾನ್‌ನ ಚಾಲಕನ ಮೇಲೆ ಗುಂಡು ಹಾರಿಸಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದರು. ವಾಹನದಲ್ಲಿ ಪ್ರಯಾಣಿಸುತ್ತಿದ್ದ ಇನ್ನೋರ್ವ ಕಾನ್‌ಸ್ಟೇಬಲ್ ಗಾಯಗೊಳ್ಳದೆ ಪಾರಾಗಿದ್ದು,ಆತನನ್ನು ಪ್ರಶ್ನಿಸಲಾಗುತ್ತಿದೆ ಎಂದರು.
ಹಿರಿಯ ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆಯನ್ನು ನಡೆಸಿದ್ದಾರೆ.