ಉತ್ತರ ಪ್ರದೇಶ; 'ಬಡತನ, ಕೆಳಜಾತಿ’ಯನ್ನು ಹಂಗಿಸಿದ ಶಿಕ್ಷಕರು; ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
ಲಕ್ನೋ: ಬಡವಳು ಮತ್ತು ಕೆಳಜಾತಿಯವಳು ಎಂದು ಹೇಳಿ ಇಬ್ಬರು ಶಿಕ್ಷಕರು ಹಂಗಿಸಿದ್ದರಿಂದ ತೀವ್ರ ಮನನೊಂದ 14 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆಗೈದ ಘಟನೆ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಿಂದ ವರದಿಯಾಗಿದೆ.
ಬಾಲಕಿ ಅಝೀಮುದ್ದೀನ್ ಅಶ್ರಫ್ ಇಸ್ಲಾಮಿಯಾ ಇಂಟರ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಳು. ಮೇ 27ರಂದು ಆಕೆ ತನ್ನ ಶಾಲಾ ಫೀಸ್ ಆದ ರೂ. 1,100 ಪಾವತಿಸಿದಾಗ ಆಕೆಯ ಒಬ್ಬ ಶಿಕ್ಷಕಿ ವಾಸ್ಫಿ ಖತೂನ್ ಅದಕ್ಕಿಂತ ಸಣ್ಣ ಮೊತ್ತ ಬರೆದ ರಸೀದಿ ನೀಡಿದ್ದರು. ಇದನ್ನು ವಿದ್ಯಾರ್ಥಿನಿ ಪ್ರಶ್ನಿಸಿದಾಗ ಶಿಕ್ಷಕಿ “ನೀನು ಬಡವಳು ಮತ್ತು ಕೆಳ ಜಾತಿಯವಳು ಆದರೆ ನೀನು ಮೇಲ್ಜಾತಿಯವರಿಗೆ ಸಮಾನಳಂತೆ ವರ್ತಿಸುತ್ತಿದ್ದಿ,” ಎಂದು ಹೇಳಿದ್ದರೆನ್ನಲಾಗಿದೆ.
ವಸ್ಫಿ ಮತ್ತೋರ್ವ ಪುರುಷ ಶಿಕ್ಷಕ ಆಗಾಗ ಇತರ ವಿದ್ಯಾರ್ಥಿಗಳೆದುರು ಈ ವಿದ್ಯಾರ್ಥಿನಿಯ ಬಡತನ ಮತ್ತು ಜಾತಿಯನ್ನು ಹಂಗಿಸುತ್ತಿದ್ದರೆನ್ನಲಾಗಿದೆ. ಇದರಿಂದ ಮನನೊಂದ ವಿದ್ಯಾರ್ಥಿನಿ ಆಗಸ್ಟ್ 4ರಂದು ನೇಣಿಗೆ ಶರಣಾಗಿದ್ದಳು. ಶಿಕ್ಷಕರು ಹಂಗಿಸುತ್ತಿದ್ದುದರಿಂದ ತಾನು ಆತ್ಮಹತ್ಯೆಗೈದಿರುವುದಾಗಿ ಆಕೆ ತನ್ನ ಸುಸೈಡ್ ನೋಟಿನಲ್ಲಿ ಬರೆದಿದ್ದಾಳೆ.
ಆದರೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ತಿಳಿದ ನಂತರ ಆಕೆಯ ನಡತೆ ಸರಿಯಿರಲಿಲ್ಲ ಎಂದು ಶಿಕ್ಷಕರು ಹೇಳಲಾರಂಭಿಸಿದ್ದಾರೆನ್ನಲಾಗಿದೆ. ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಆರೋಪದ ಮೇಲೆ ಶಿಕ್ಷಕರ ವಿರುದ್ಧ ಬಾಲಕಿಯ ತಾಯಿ ದಾಖಲಿಸಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.
ಶಿಕ್ಷಕರ ವಿರುದ್ಧದ ಆರೋಪವನ್ನು ಶಾಲಾ ಪ್ರಾಂಶುಪಾಲ ಜಮ್ಶೆದ್ ಅಹ್ಮದ್ ನಿರಾಕರಿಸಿದ್ದಾರೆ.