ಕರಣ್ ಥಾಪರ್ ಪ್ರಶ್ನೆಗೆ ಉತ್ತರಿಸಲಾಗದೆ ಸಿಟ್ಟಾದ ಪ್ರಶಾಂತ್ ಕಿಶೋರ್

Update: 2024-05-23 05:28 GMT

Screengrab: Youtube/The Wire

ಹೊಸದಿಲ್ಲಿ: ದಿ ವೈರ್ ಗಾಗಿ ಕರಣ್ ಥಾಪರ್ ನಡೆಸಿದ ಸಂದರ್ಶನದಲ್ಲಿ ಖ್ಯಾತ ಚುನಾವಣಾ ರಣತಂತ್ರಗಾರ ಪ್ರಶಾಂತ್ ಕಿಶೋರ್ ಚುನಾವಣಾ ಫಲಿತಾಂಶಗಳ ಕುರಿತ ತನ್ನ ಹಳೆಯ ಭವಿಷ್ಯವಾಣಿಗಳ ಬಗ್ಗೆ ಉಲ್ಲೇಖಿಸಿದ್ದಕ್ಕೆ ತೀವ್ರ ಸಿಟ್ಟಾದ ಘಟನೆ ನಡೆದಿದೆ.

2014ರಲ್ಲಿ ಪ್ರಧಾನಿ ಮೋದಿ ಹಾಗು ಬಿಜೆಪಿಗಾಗಿ ಚುನಾವಣಾ ಪ್ರಚಾರ ತಂತ್ರ ರೂಪಿಸಿ ದೇಶಾದ್ಯಂತ ಖ್ಯಾತಿ ಗಳಿಸಿದ್ದ ಪ್ರಶಾಂತ್ ಕಿಶೋರ್, ಆ ಬಳಿಕ ಬೇರೆ ಹಲವು ಪಕ್ಷಗಳಿಗಾಗಿಯೂ ಚುನಾವಣಾ ರಣತಂತ್ರಗಾರನಾಗಿ ಕೆಲಸ ಮಾಡಿದ್ದಾರೆ. ಕೆಲವು ಪಕ್ಷಗಳ ಜೊತೆ ಅವರ ಯೋಜನೆ ಯಶಸ್ವಿಯಾಗಿದ್ದರೆ, ಕೆಲವೆಡೆ ಅದು ವಿಫಲವೂ ಆಗಿತ್ತು. ಈಗ ಅವರು ಸ್ವತಃ ಸಾರ್ವಜನಿಕ ಜೀವನವನ್ನು ಪ್ರವೇಶಿಸಿದ್ದು ತಮ್ಮ ತವರು ರಾಜ್ಯ ಬಿಹಾರದಲ್ಲಿ ಜನ ಸ್ವರಾಜ್ ಯಾತ್ರೆ ನಡೆಸುತ್ತಿದ್ದಾರೆ. ಮುಂದಿನ ವಿಧಾನ ಸಭಾ ಚುನಾವಣೆಗೆ ʼಜನ ಸ್ವರಾಜ್ʼ ಅನ್ನು ರಾಜಕೀಯ ಪಕ್ಷ ಮಾಡುವುದು ಅವರ ಉದ್ದೇಶ.

ಪ್ರಶಾಂತ್ ಕಿಶೋರ್ ಈ ಮಹಾ ಚುನಾವಣೆ ಕುರಿತು ಸರಣಿ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಅದರಲ್ಲಿ ಅವರು ಬಿಜೆಪಿ ಈ ಬಾರಿಯೂ ಮುನ್ನೂರು ಅಥವಾ ಅದಕ್ಕಿಂತ ಹೆಚ್ಚೇ ಸೀಟು ಪಡೆದು ಸರಕಾರ ರಚಿಸಲಿದೆ ಎಂದು ಹೇಳುತ್ತಿದ್ದಾರೆ. ಉತ್ತರದಲ್ಲಿ ಗರಿಷ್ಟ ಐವತ್ತು ಸೀಟು ಕಡಿಮೆಯಾದರೂ ದಕ್ಷಿಣ ಹಾಗು ಪೂರ್ವದಲ್ಲಿ ಅದಕ್ಕೆ ಸಿಗುವ ಹೆಚ್ಚುವರಿ ಸೀಟುಗಳಿಂದ ಆ ನಷ್ಟ ಭರ್ತಿಯಾಗಲಿದೆ ಎಂದು ಪ್ರಶಾಂತ್ ಹೇಳುತ್ತಿದ್ದಾರೆ. ಆದರೆ ವಿವಿಧ ರಾಜ್ಯಗಳಿಂದ ಬರುತ್ತಿರುವ ಸಮೀಕ್ಷೆಗಳು , ಅಲ್ಲಿಗೆ ಭೇಟಿ ನೀಡುತ್ತಿರುವ ಪತ್ರಕರ್ತರು ಹಾಗು ವಿಶ್ಲೇಷಕರ ಅನುಭವಗಳು ಬಿಜೆಪಿಗೆ ಈ ಬಾರಿ ಸಾಕಷ್ಟು ಸೀಟುಗಳು ನಷ್ಟವಾಗಲಿದೆ ಎಂದೇ ಹೇಳುತ್ತಿವೆ. ಉತ್ತರದಲ್ಲಿ ಬಿಜೆಪಿಗೆ ಹಲವು ಸೀಟು ಕಡಿಮೆಯಾಗಲಿದ್ದು ದಕ್ಷಿಣದಲ್ಲೂ ಅದಕ್ಕೆ ಕಳೆದ ಬಾರಿಗಿಂತ ಕಡಿಮೆ ಸೀಟುಗಳು ಬರಲಿವೆ ಎಂದು ಹೇಳಲಾಗುತ್ತಿದೆ.

ಕರಣ್ ಥಾಪರ್ ಜೊತೆಗಿನ ಸಂದರ್ಶನದಲ್ಲೂ ಪ್ರಶಾಂತ್ ಕಿಶೋರ್, ಬಿಜೆಪಿ ಈ ಬಾರಿ ಮುನ್ನೂರಕ್ಕಿಂತ 5 ರಿಂದ 15 ಹೆಚ್ಚೇ ಸೀಟುಗಳನ್ನು ಪಡೆಯಲಿದೆ. ಆದರೆ ಕಾಂಗ್ರೆಸ್ ನೂರು ಸೀಟನ್ನು ಪಡೆಯೋದು ಅಸಾಧ್ಯ ಎಂದು ಹೇಳಿದ್ದರು. ಆದರೆ ಕಳೆದ ವರ್ಷ ಹಿಮಾಚಲ ಪ್ರದೇಶದಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಾಣಲಿದೆ ಎಂದಿದ್ದ ಅವರ ಹೇಳಿಕೆ ಬಗ್ಗೆ ಪ್ರಶ್ನಿಸಿದ ಕೂಡಲೇ ಪ್ರಶಾಂತ್ ತೀವ್ರ ಸಿಟ್ಟಾದರು. ಕಾಂಗ್ರೆಸ್ ಹೀನಾಯವಾಗಿ ಸೋಲಲಿದೆ ಎಂದು ಪ್ರಶಾಂತ್ ಹೇಳಿದ್ದು ಹಲವು ಪ್ರಮುಖ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಸ್ವತಃ ಅವರೂ ಟ್ವೀಟ್ ಮಾಡಿದ್ದರು. ಆದರೆ ಅಲ್ಲಿ ಕಾಂಗ್ರೆಸ್ ಗೆದ್ದು ಸರಕಾರ ರಚಿಸಿತು.

" ಕಾಂಗ್ರೆಸ್ ಹಿಮಾಚಲದಲ್ಲಿ ಸೋಲುತ್ತದೆ ಎಂದು ನಾನು ಹೇಳಿದ ವೀಡಿಯೊ ತೋರಿಸಬೇಕು, ಇಲ್ಲದಿದ್ದರೆ ನೀವು ಕ್ಷಮೆ ಯಾಚಿಸಬೇಕು " ಎಂದು ಪ್ರಶಾಂತ್ ಪಟ್ಟು ಹಿಡಿದರು. ಅದಕ್ಕೆ ಮಾಧ್ಯಮಗಳಲ್ಲಿ ಬಂದಿರುವ ಅವರ ಹೇಳಿಕೆಗಳನ್ನು ಕರಣ್ ಥಾಪರ್ ಉಲ್ಲೇಖಿಸಲು ಅವರು ಮೊದಲು ಆಸ್ಪದವನ್ನೇ ಕೊಡಲಿಲ್ಲ. ಬಳಿಕ ಮಾಧ್ಯಮಗಳು ಏನು ಬೇಕಾದರೂ ಬರೆಯುತ್ತವೆ. ಅದಕ್ಕೆ ನಾನು ಜವಾಬ್ದಾರನಲ್ಲ. ನಿಮ್ಮಂತಹ ಪತ್ರಕರ್ತರು ಏನು ಬೇಕಾದರೂ ಬರೀತೀರಿ ಎಂದು ಕರಣ್ ಥಾಪರ್ ವಿರುದ್ಧವೇ ಆರೋಪ ಮಾಡಿದರು. ಆದರೆ ಸ್ವತಃ ಪ್ರಶಾಂತ್ ಹಿಮಾಚಲದಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲುತ್ತೆ ಎಂದು ಟ್ವೀಟ್ ಮಾಡಿದ್ದರು.

ತೀವ್ರ ಅಸಮಾಧಾನಗೊಂಡವರಂತೆ ಕಂಡ ಪ್ರಶಾಂತ್ ಗೆ ʼನೀವು ಸಂದರ್ಶನ ಮುಂದುವರಿಸಲು ಇಚ್ಛಿಸುತ್ತೀರಾ ಅಥವಾ ಮುಗಿಸಲು ಬಯಸುತ್ತೀರಾ?ʼ ಎಂದು ಕರಣ್ ಥಾಪರ್ ಕೇಳಿದ್ದು ಇನ್ನಷ್ಟು ಸಿಟ್ಟಾಗಿಸಿತು. ನಿಮ್ಮಂತಹ ಒಬ್ಬರಲ್ಲ ನಾಲ್ವರನ್ನು ನಾನು ಸುಧಾರಿಸಬಲ್ಲೆ, ನನಗೆ ನಿಮ್ಮನ್ನು ಹೇಗೆ ಎದುರಿಸಬೇಕು ಎಂದು ಚೆನ್ನಾಗಿ ಗೊತ್ತಿದೆ. ನಾನೇನೂ ಎದ್ದು ಹೋಗುವುದಿಲ್ಲ. ನೀವೇ ದೊಡ್ಡ ಖಡಕ್ ಸಂದರ್ಶಕ ಎಂಬ ಭ್ರಮೆಯಲ್ಲಿರಬೇಡಿ ಎಂದು ಕರಣ್ ಥಾಪರ್ ಮೇಲೆ ಎಗರಾಡಿದರು. ಈ ಸಂದರ್ಭದಲ್ಲಿ ಅವರು ತೀವ್ರ ವಿಚಲಿತರಾದಂತೆ ಕಂಡು ಬಂದರು. ಆಗಲೇ ಪಕ್ಕದಲ್ಲಿದ್ದ ಲೋಟ ಎತ್ತಿ ನೀರನ್ನೂ ಕುಡಿದರು.

ಈಗ ಜನರು ಪ್ರಶಾಂತ್ ಕಿಶೋರ್ ಅವರ ಸಂದರ್ಶನವನ್ನು 2007 ರಲ್ಲಿ ಕರಣ್ ಥಾಪರ್ ಮಾಡಿದ್ದ ನರೇಂದ್ರ ಮೋದಿಯ ಸಂದರ್ಶನಕ್ಕೆ ಹೋಲಿಸಿ ಮಾತಾಡುತ್ತಿದ್ದಾರೆ. ಆಗ ಗುಜರಾತ್ ಸಿಎಂ ಆಗಿದ್ದ ಮೋದಿ 2002 ರ ಗುಜರಾತ್ ಹತ್ಯಾಕಾಂಡದ ಕುರಿತ ಕರಣ್ ಥಾಪರ್ ಅವರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ನೀರು ಕೇಳಿ ಕುಡಿದು ಸಂದರ್ಶನದಿಂದ ಎದ್ದು ಹೋಗಿದ್ದರು. ಈಗ ದೇಶಾದ್ಯಂತ ಬಿಜೆಪಿಗೆ ಹಿನ್ನಡೆಯಾಗಬಹುದು ಎಂಬ ವರದಿಗಳು ಇರುವಾಗಲೇ ಬಿಜೆಪಿಗೆ ಮುನ್ನೂರಕ್ಕಿಂತಲೂ ಹೆಚ್ಚು ಸೀಟುಗಳು ಬರಬಹುದು ಎಂದು ಪದೇ ಪದೇ ಹೇಳುತ್ತಿರುವ ಪ್ರಶಾಂತ್ ಕಿಶೋರ್ ಹಾಗೇ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಸಿಟ್ಟು ಮಾಡಿಕೊಂಡರು ಎಂದು ಪತ್ರಕರ್ತರು, ಜನರು ಹೇಳುತ್ತಿದ್ದಾರೆ.

ಆ ಸಂದರ್ಶನ ಇಲ್ಲಿ ಕೆಳಗಿದೆ. ಕೊನೆಯ ಹತ್ತು ನಿಮಿಷಗಳಲ್ಲಿ ಇಬ್ಬರ ನಡುವೆ ಜಟಾಪಟಿ ನಡೆದಿದೆ.

Full View

ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News