ಮತಕ್ಕಾಗಿ ಹಣ ಆಗ್ರಹಿಸಿ ಆಂಧ್ರದಲ್ಲಿ ಪ್ರತಿಭಟನೆ!

Update: 2024-05-13 02:36 GMT

ಸಾಂದರ್ಭಿಕ ಚಿತ್ರ Photo: PTI 

ವಿಜಯವಾಡ: ಮತದಾನ ಮಾಡಲು ವಿವಿಧ ರಾಜಕೀಯ ಪಕ್ಷಗಳಿಂದ ಹಣಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಕನಿಷ್ಠ ಐದು ಪ್ರಕರಣಗಳು ಆಂಧ್ರಪ್ರದೇಶದಲ್ಲಿ ಭಾನುವಾರ ನಡೆದಿವೆ. ಆಂಧ್ರದಲ್ಲಿ ಈ ಸಮಸ್ಯೆ ಹೊಸದಲ್ಲ.ಆದರೆ ಹಣದುಬ್ಬರ ಏರಿಕೆಯಾಗುತ್ತಿದ್ದಂತೆ ಮತಗಳ ಬೆಲೆ ಕೂಡಾ ಹೆಚ್ಚುತ್ತಿದೆ. ವಿವಿಧ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರಗಳಲ್ಲಿ ಒಂದು ಮತಕ್ಕೆ ಒಂದು ಸಾವಿರದಿಂದ ಆರು ಸಾವಿರ ರೂಪಾಯಿವರೆಗೆ ಬೆಲೆ ನಿಗದಿಯಾಗಿದೆ ಎಂದು ಮೂಲಗಳು ಹೇಳುತ್ತಿವೆ.

ರಾಜ್ಯದ 175 ವಿಧಾನಸಭಾ ಹಾಗೂ 25 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದ್ದು, ಮುನ್ನಾ ದಿನ, ಭರವಸೆ ನೀಡಿದ ಹಣ ತಲುಪದ ಕಾರಣ ಗ್ರಾಮಸ್ಥರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಶನಿವಾರ ಸಂಜೆ ಬಹಿರಂಗ ಪ್ರಚಾರ ಮುಕ್ತಾಯವಾಗಿದ್ದರೂ, ಹಣದ ವಿತರಣೆ ಕೆಲವೆಡೆ ಮುಂದುವರಿದಿದೆ ಎಂದು ಆಪಾದಿಸಲಾಗಿದೆ. ಪಾಲಂಡುವಿನ ಸತ್ತೇನಪಳ್ಳಿಯಲ್ಲಿ 18ನೇ ವಾರ್ಡ್ ನ  ಮತದಾರರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, ತಮ್ಮ ಮತಗಳಿಗಾಗಿ ಹಣ ನೀಡುವ ಆಶ್ವಾಸನೆ ನೀಡಲಾಗಿತ್ತು. ಆದರೆ ಇದುವರೆಗೆ ಹಣ ತಲುಪಿಲ್ಲ ಎಂದು ಆಪಾದಿಸಿದರು.

ಇಂಥದ್ದೇ ದೃಶ್ಯಗಳು ಪೀತಂಪುರಂನಲ್ಲಿ ಕೂಡಾ ಕಂಡುಬಂದಿದ್ದು, ಸ್ಪರ್ಧಾಕಣದಲ್ಲಿರುವ ಅಭ್ಯರ್ಥಿಗಳ ಕಚೇರಿಗಳ ಮುಂದೆ ಮತದಾರರು  ಪ್ರತಿಭಟನೆ ನಡೆಸಿದರು. ಪಕ್ಷದ ಬೆಂಬಲಿಗರು ಪ್ರತಿ ಮತಕ್ಕೆ 5000 ರೂಪಾಯಿ ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದ್ದು, ಮಹಿಳಾ ಮತದಾರರಿಗೆ ಅದನ್ನು ನೀಡಿಲ್ಲ ಎನ್ನುವುದು ಆಕ್ರೋಶಕ್ಕೆ ಕಾರಣ. ಪರಿಸ್ಥಿತಿ ಉಲ್ಬಣಗೊಂಡು, ಗುಂಪು ಚದುರಿಸಲು ಪೊಲೀಸರು ಮಧ್ಯಪ್ರವೇಶ ಮಾಡಬೇಕಾಯಿತು.

ಓಂಗೋಲ್ ನಲ್ಲಿ ಪ್ರತಿ ಮತಕ್ಕೆ 5 ಸಾವಿರ ರೂಪಾಯಿಯಂತೆ ವಿತರಿಸಲಾಗಿದೆ ಎನ್ನಲಾಗಿದ್ದು, ಕೆಲವರನ್ನು ಬಿಟ್ಟಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಪೂರ್ವ ಗೋದಾವರಿ ಜಿಲ್ಲೆಯ ಕೊಂಡೇವರಂ ಗ್ರಾಮದಲ್ಲಿ ತಮಗೆ ಹಣ ನೀಡಿಲ್ಲ ಎಂದು ಆಪಾದಿಸಿ ಗ್ರಾಮಸ್ಥರು ಪ್ರತಿಭನೆ ನಡೆಸಿದರು.

ವಿಜಯವಾಡದ ಕೆಲ ಪಾಲಿಕೆ ಸದಸ್ಯರ ಮನೆಗಳಲ್ಲಿ ಹಣ ವಿತರಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ. ಒಬ್ಬ ಮತದಾರರ ಪ್ರಕಾರ, ವಿಧಾನಸಭೆಗೆ ಸ್ಪರ್ಧಿಸಿದ ಅಭ್ಯರ್ಥಿಯೊಬ್ಬರು ತಮ್ಮ ಸಹಚರರ ಮೂಲಕ ಪಾಲಿಕೆ ಸದಸ್ಯರ ಮನೆಗೆ ಹಣ ಕಳುಹಿಸಿದ್ದಾರೆ ಎನ್ನಲಾಗಿದ್ದು, ಪ್ರತಿ ಮತಕ್ಕೆ ಒಂದು ಸಾವಿರ ರೂಪಾಯಿಯಂತೆ ವಿತರಿಸಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News