ತಪ್ಪು ಮಾಡಿದ ಅಧಿಕಾರಿಗೆ ಅಂಗವಿಲಕರ ಸೇವೆ ಮಾಡುವ ಶಿಕ್ಷೆ!
ಹೊಸದಿಲ್ಲಿ: ಮಹಾನಗರ ದೂರಸಂಪರ್ಕ ನಿಗಮದ ಉದ್ಯೋಗಿಯೊಬ್ಬರನ್ನು ಸಾಮಾನ್ಯ ವರ್ಗದಿಂದ ಅಂಗವೈಕಲ್ಯ ಹೊಂದಿದ ವ್ಯಕ್ತಿ ಎಂಬ ವರ್ಗಕ್ಕೆ ಸೇರಿಸಲು ನಾಲ್ಕು ವರ್ಷ ವಿಳಂಬ ಮಾಡಿದ ಅಧಿಕಾರಿಗೆ, ಐದು ದಿನ ದೆಹಲಿಯ ಅಂಗವಿಕಲ ವಿದ್ಯಾರ್ಥಿಗಳ ಸಂಸ್ಥೆಯಲ್ಲಿ ಸೇವೆ ಮಾಡುವಂತೆ ಅಂಗವಿಲಕರ ಮುಖ್ಯ ಆಯುಕ್ತರ ನ್ಯಾಯಾಲಯ ಅಪರೂಪದ ಶಿಕ್ಷೆ ವಿಧಿಸಿದೆ.
ಉದ್ಯೋಗಿಯ ವರ್ಗವನ್ನು ಬದಲಾಯಿಸಲು ನಾಲ್ಕು ವರ್ಷಗಳ ಅವಧಿ ತೆಗೆದುಕೊಂಡ ಅಧಿಕಾರಿಯ ಕ್ರಮವನ್ನು ಸಿಸಿಪಿಡಿ ಮುಖ್ಯ ಆಯುಕ್ತ ರಾಜೇಶ್ ಅಗರ್ವಾಲ್ ಗಂಭೀರವಾಗಿ ಪರಿಗಣಿಸಿ, ಈ ಶಿಕ್ಷೆ ವಿಧಿಸಿದರು.
ವಿಳಂಬಕ್ಕೆ ಕಾರಣವಾದ ಅಧಿಕಾರಿಯನ್ನು ಪತ್ತೆ ಮಾಡುವಂತೆ ನ್ಯಾಯಾಲಯ ಈ ಮೊದಲು ನಡೆದ ವಿಚಾರಣೆ ವೇಳೆ ಎಂಟಿಎನ್ಎಲ್ ಗೆ ಆದೇಶ ನೀಡಿತ್ತು. ಜತೆಗೆ ಇದಕ್ಕೆ ಕಾರಣರಾದ ಅಧಿಕಾರಿಯನ್ನು ಅಮರಜ್ಯೋತಿ ಚಾರಿಟಬಲ್ ಟ್ರಸ್ಟ್ ನ ಅಂಗವಿಕಲರ ಶಾಲೆಗೆ ಸೇವೆಗಾಗಿ ಕಳುಹಿಸುವಂತೆ ಸೂಚಿಸಿದೆ. "ಅಂಗವಿಲಕರ ವಿಷಯಗಳು ಅಧಿಕಾರಿಯ ಸಂವೇದನೆಗೆ ಬರಬೇಕು" ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಸೇವೆಯನ್ನು ಪೂರ್ಣಗೊಳಿಸಲು ಡಿಸೆಂಬರ್ 31ರ ಗಡುವು ನೀಡಿದೆ.
ಸಿಸಿಪಿಡಿಗೆ ಈ ವರ್ಷದ ಆರಂಭದಲ್ಲಿ ದೂರು ನೀಡಿದ ಎಂಟಿಎನ್ಎಲ್ ಉದ್ಯೋಗಿ, ತಾನು ಶೇಕಡ 60ರಷ್ಟು ಚಲನೆಗೆ ಸಂಬಂಧಿಸಿದ ಅಂಗವೈಕಲ್ಯ ಹೊಂದಿದ್ದರೂ, ತನ್ನನ್ನು ಅಂಗವಿಕಲರ ವರ್ಗದಲ್ಲಿ ಸೇರಿಸದೇ ಸಾಮಾನ್ಯ ವರ್ಗದಲ್ಲಿ ಸೇರಿಸಲಾಗಿತ್ತು. ಈ ಪರಿಸ್ಥಿತಿ ಉಲ್ಬಣಗೊಂಡು ಸಂಪೂರ್ಣ ಅಂಗವೈಕಲ್ಯ ಉಂಟಾಯಿತು. ಈ ಬಗ್ಗೆ ಎಐಐಎಂಎಸ್ ಪ್ರಮಾಣಪತ್ರವನ್ನೂ ನೀಡಲಾಗಿತ್ತು. 2009ರ ವರ್ಗಾವಣೆ ಅವಧಿಯಲ್ಲೂ ಈ ಬಗ್ಗೆ ಕಚೇರಿಗೆ ಮಾಹಿತಿ ನೀಡಲಾಗಿತ್ತು. ಬಳಿಕ ಅಂಗವಿಲಕರ ವರ್ಗಕ್ಕೆ ಸೇರಿಸುವಂತೆ ಮನವಿಯನ್ನೂ ಸಲ್ಲಿಸಲಾಗಿತ್ತು ಎಂದು ದೂರುದಾರರು ವಿವರಿಸಿದ್ದರು.