ಪಂಜಾಬ್ ಸರ್ಕಾರಕ್ಕೆ ಸೆಡ್ಡು: ಜಾಮೀನು ಕೋರದ ರೈತ ಪ್ರತಿಭಟನಾಕಾರರು

PC: x.com/catale7a
ಭಟಿಂಡಾ: ಬಂಧಿತ ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ಮತ್ತು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಹೋರಾಟಗಾರರು ಜಾಮೀನು ಕೋರದಿರಲು ನಿರ್ಧರಿಸಿದ್ದಾರೆ. ಈ ಮೂಲಕ ಪಂಜಾಬ್ ಸರ್ಕಾರಕ್ಕೆ ಸೆಡ್ಡು ಹೊಡೆದಿರುವ ರೈತರು ಎಷ್ಟು ದಿನಗಳ ಕಾಲ ಜೈಲಿನಲ್ಲಿ ತಮ್ಮನ್ನು ಇರಿಸಿಕೊಳ್ಳುತ್ತದೆ ಎಂದು ನೋಡಲು ಬಯಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಬಂಧಿತ ಮುಖಂಡರ ಸ್ಫೂರ್ತಿ ಅತ್ಯುನ್ನತವಾಗಿದ್ದು, ಪ್ರತಿಭಟನೆಯನ್ನು ಮುಂದುವರಿಸುವ ಬಲವಾದ ಇಂಗಿತವನ್ನು ವ್ಯಕ್ತಪಡಿಸಿದ್ದಾಗಿ ಶನಿವಾರ ಪಾಟಿಯಾಲಾ ಜೈಲಿಗೆ ಭೇಟಿ ನೀಡಿದ 14 ಮಂದಿ ಕೆಎಂಎಂ ಮುಖಂಡರ ನಿಯೋಗ ಸ್ಪಷ್ಟಪಡಿಸಿದೆ.
ರೈತ ಮುಖಂಡರಾದ ಸರ್ವನ್ ಸಿಂಗ್ ಪಂಢೇರ್, ಕಾಕಾ ಸಿಂಗ್ ಕೋಟ್ಡಾ, ಅಭಿಮನ್ಯು ಕೋಹದ್, ಮಂಜೀತ್ ಸಿಂಗ್ ರಾಯ್, ಸುಖ್ವೀಂದರ್ ಕೌರ್, ಕೇರಳದ ಪಿ.ಟಿ.ಜಾನ್, ನಂದಕುಮಾರ್, ತಮಿಳುನಾಡಿನ ಪಿ.ಪಾಂಡ್ಯನ್ ಮತ್ತು ಇತರ ಮುಖಂಡರನ್ನು ನಿಯೋಗ ಭೇಟಿ ಮಾಡಿತು.
ಪಂಜಾಬ್ ಸರ್ಕಾರ ತಮ್ಮನ್ನು ವಂಚಿಸಿದೆ ಎಂಬ ಭಾವನೆಯನ್ನು ರೈತಮುಖಂಡರು ಹೊಂದಿದ್ದಾರೆ. ಕಳೆದ 117 ದಿನಗಳಿಮದ ಉಪಾಸ ಸತ್ಯಾಗ್ರಹ ನಡೆಸುತ್ತಿರುವ ಜಗಜೀತ್ ಸಿಂಗ್ ದಲ್ಲೇವಾಲ್ ಅವರನ್ನು ಮನವೊಲಿಸುವ ಪ್ರಯತ್ನವನ್ನೂ ಸರ್ಕಾರ ಮಾಡಿಲ್ಲ. ರೈತ ಮುಖಂಡರನ್ನು ನಡೆಸಿಕೊಂಡ ರೀತಿ ಸಹಿಸುವಂಥದ್ದಲ್ಲ. ರಾಜ್ಯ ಸರ್ಕಾರದ ಕ್ರಮಗಳು ಇಡೀ ದೇಶದಲ್ಲಿ ಪ್ರತಿಧ್ವನಿಸಿವೆ. ಇಂಥ ಕ್ರಮಗಳಿಂದ ಸರ್ಕಾರಕ್ಕೆ ಯಾವುದೇ ಲಾಭ ಇಲ್ಲ ಮತ್ತು ಇದು ಅಪನಂಬಿಕೆಯನ್ನು ಹೆಚ್ಚಿಸುತ್ತದೆ ಎನ್ನುವುದನ್ನು ತೋರಿಸಿಕೊಡಲಿದ್ದೇವೆ ಎಂದು ನಿಯೋಗ ಸ್ಪಷ್ಟಪಡಿಸಿದೆ.
ಯಾವುದೇ ಜಾಮೀನು ಅರ್ಜಿಯನ್ನು ಸಲ್ಲಿಸದಂತೆ ಬಂಧಿತ ಮುಖಂಡರು ಸೂಚಿಸಿದ್ದು, ಆಮದ್ ಆದ್ಮಿ ಸರ್ಕಾರದ ನೈಜ ಬಣ್ಣ ಏನು ಎನ್ನುವುದು ಲೋಕಕ್ಕೆ ತಿಳಿಯಲಿ ಎಂಬುದಾಗಿ ಅಭಿಪ್ರಾಯ ಹೊಂದಿದ್ದಾರೆ ಎಂದು ರೈತ ಮುಖಂಡರಾದ ಗುರ್ಮೀಟ್ ಸಿಂಗ್ ಮತ್ತು ತೇಜವೀರ್ ಸಿಂಗ್ ವಿವರಿಸಿದ್ದಾರೆ.