ಶಂಭು ಗಡಿಯಲ್ಲಿ ಪ್ರತಿಭಟನಾ ನಿರತರಾಗಿದ್ದ ರೈತರನ್ನು ತೆರವುಗೊಳಿಸಿದ ಪಂಜಾಬ್ ಪೊಲೀಸರು

Update: 2025-03-20 07:45 IST
ಶಂಭು ಗಡಿಯಲ್ಲಿ ಪ್ರತಿಭಟನಾ ನಿರತರಾಗಿದ್ದ ರೈತರನ್ನು ತೆರವುಗೊಳಿಸಿದ ಪಂಜಾಬ್ ಪೊಲೀಸರು

PC:screengrab/ x.com/ANI

  • whatsapp icon

ಭಟಿಂಡಾ: ಉಪವಾಸ ನಿರತ ರೈತ ಮುಖಂಡರಾದ ಜಗಜೀತ್ ಸಿಂಗ್ ದಲ್ಲೇವಾಲ್ ಮತ್ತು ಕಿಸಾನ್ ಮಜ್ದೂರು ಮೋರ್ಚಾ ಮುಖ್ಯಸ್ಥ ಸರ್ವನ್ ಸಿಂಗ್ ಪಂಧೇರ್ ಸೇರಿದಂತೆ ಹಲವು ಮಂದಿ ಪ್ರಮುಖ ರೈತ ಹೋರಾಟಗಾರರನ್ನು ಪೊಲೀಸರು ಮೊಹಾಲಿಯಲ್ಲಿ ಬಂಧಿಸಿದ್ದಾರೆ. ಕೇಂದ್ರ ಸರ್ಕಾರದ ನಿಯೋಗದ ಜತೆ ಚಂಡೀಗಢದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ವಾಪಸ್ಸಾದ ಇವರನ್ನು ಬಂಧಿಸಲಾಗಿದ್ದು, ಶಂಭು ಗಡಿ ಮತ್ತು ಖನೌರಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನೂ ತೆರವುಗೊಳಿಸಲಾಗಿದೆ.

ಶಂಭು ಮತ್ತು ಖನೌರಿ ಗಡಿಯಲ್ಲಿ ಪ್ರತಿಭಟನಾ ನಿರತ ರೈತರಿಗೆ ಯಾವುದೇ ತೊಂದರೆ ಕೊಡುವುದಿಲ್ಲ ಎಂದು ಪಂಜಾಬ್ ಸಚಿವರು ಹೇಳಿಕೆ ನೀಡುತ್ತಿರುವ ನಡುವೆಯೇ ಈ ಕಾರ್ಯಾಚರಣೆ ನಡೆದಿದೆ. ಬುಧವಾರ ತಡರಾತ್ರಿ ಉಭಯ ಪ್ರತಿಭಟನಾ ತಾಣಗಳಲ್ಲಿ ರೈತರನ್ನು ತೆರವುಗೊಳಿಸಲಾಗಿದೆ. ಖನೌರಿಯಲ್ಲಿ 250 ಮಂದಿ ಹಾಗೂ ಶಂಭು ಗಡಿಯಲ್ಲಿ 110 ಮಂದಿಯನ್ನು ಮತ್ತು ಮೊಹಾಲಿಯಲ್ಲಿ ಕೆಲ ರೈತರನ್ನು ಬಂಧಿಸಲಾಗಿದೆ ಎಂದು ಹಿರಿಯ ಪಂಜಾಬ್ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಎಲ್ಲರನ್ನೂ ಕಲ್ಯಾಣ ಮಂಟಪವೊಂದಕ್ಕೆ ಸ್ಥಳಾಂತರಿಸಲಾಗಿದೆ. 2024ರ ಫೆಬ್ರವರಿಯ ಬಳಿಕ ರೈತರು ಹಾಗೂ ಕೇಂದ್ರದ ಪ್ರತಿನಿಧಿಗಳ ನಡುವೆ ನಡೆದ ಏಳನೇ ಸುತ್ತಿನ ಮಾತುಕತೆ ಇದಾಗಿತ್ತು. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವ ಕಾನೂನು ಜಾರಿಗೊಳಿಸಬೇಕೆಂಬ ಬೇಡಿಕೆ ಬಗ್ಗೆ ಮಾತುಕತೆ ನಡೆಯುತ್ತಿದೆ.

ಎಂಎಸ್ಪಿ ಸಮಸ್ಯೆ ಬಗ್ಗೆ ಆಳವಾಗಿ ಅಧ್ಯಯನ ನಡೆಸುವ ಸಲುವಾಗಿ ವಿವಿಧ ಹಕ್ಕುದಾರರನ್ನು ಚರ್ಚೆಯಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಜಂಟಿ ಕಾರ್ಯದರ್ಶಿಯನ್ನು ನೇಮಕ ಮಾಡಲು ಕೇಂದ್ರ ಸಚಿವರು ನಿರ್ಧರಿಸಿದರು. ಮುಂದಿನ ಸುತ್ತಿನ ಮಾತುಕತೆ ಮೇ 4ರಂದು ನಡೆಯಲಿದೆ. ಜಂಟಿ ಕಾರ್ಯದರ್ಶಿ ಪೂರ್ಣಚಂದ ಕಿಶನ್ ಅವರು ಕೃಷಿ ತಜ್ಞರು ಮತ್ತು ರೈತ ಮುಖಂಡರ ಜತೆ ಚರ್ಚೆ ನಡೆಸುವರು. ಪ್ರತಿಷ್ಠಿತ ಸಂಸ್ಥೆಗಳಾದ ಆರ್ಗನೈಸೇಷನ್ ಫಾರ್ ಎಕನಾಮಿಕ್ ಕೋ ಆಪರೇಷನ್ ಅಂಡ್ ಡೆವಲಪ್ಮೆಂಟ್, ಕ್ರಿಸಿಲ್ ಮತ್ತು ಆರ್ ಬಿಐನಂಥ ಸಂಸ್ಥೆಗಳ ಅಂಕಿ ಅಂಶಗಳನ್ನು ರೈತರು ಪ್ರಸ್ತುತಪಡಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.

ಎಂಎಸ್ ಪಿ ಅನುಷ್ಠಾನದಿಂದ ಆಗುವ ಹಣಕಾಸು ಪರಿಣಾಮಗಳನ್ನು ಈ ಅಂಕಿ ಅಂಶಗಳು ಬಿಂಬಿಸಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News