FACT CHECK | ಸಂಸದರನ್ನು ತಳ್ಳಿದ್ದನ್ನು ಒಪ್ಪಿಕೊಂಡರೇ ರಾಹುಲ್ ಗಾಂಧಿ?; ನಕಲಿ ವೀಡಿಯೊ ಹಂಚಿಕೊಂಡ ಬಿಜೆಪಿ ನಾಯಕರು
ಸಂಸತ್ತಿನಲ್ಲಿ ಪ್ರತಿಭಟನೆಯ ವೇಳೆ ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಅವರನ್ನು ತಳ್ಳಿದ್ದನ್ನು ರಾಹುಲ್ ಗಾಂಧಿ ಒಪ್ಪಿಕೊಂಡಿದ್ದಾರೆ ಎಂದು ಬಿಂಬಿಸುವ ಎಡಿಟ್ ಮಾಡಿದ ವೀಡಿಯೊ ತುಣುಕನ್ನು ಬಿಜೆಪಿ ಮುಖಂಡರು ಮತ್ತು ಬೆಂಬಲಿಗರು ಹಂಚಿಕೊಂಡಿದ್ದಾರೆ.
16 ಸೆಕೆಂಡ್ ಗಳ ಅವಧಿಯ ವೀಡಿಯೊ ಕ್ಲಿಪ್ ನಲ್ಲಿ ರಾಹುಲ್ ಗಾಂಧಿ ಹಿಂದಿಯಲ್ಲಿ ʼಇಲ್ಲ ಇಲ್ಲ. ನೋಡಿ, ನೋಡಿ! ಹೌದು, ಹೌದು, ಮಾಡಿದ್ದೇನೆ. ಆದರೆ ಪರವಾಗಿಲ್ಲ. ಈ ರೀತಿ ತಳ್ಳುವುದು ನನಗೇನು ದೊಡ್ಡ ವಿಷಯವಲ್ಲʼ ಎಂದು ಹೇಳುವಂತೆ ತೋರಿಸುತ್ತದೆ.
ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಈ ಕುರಿತ ವೀಡಿಯೊವನ್ನು ಎಕ್ಸ್ ಮತ್ತು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ʼರಾಹುಲ್ ಗಾಂಧಿ ಅವರೇ ತಾವು ತಳ್ಳಿದ್ದನ್ನು ಒಪ್ಪಿಕೊಳ್ಳುತ್ತಿದ್ದಾರೆ ಮತ್ತು ತಳ್ಳಿದರೆ ಏನೂ ಆಗುವುದಿಲ್ಲ ಎಂದು ನಾಚಿಕೆಯಿಲ್ಲದೆ ಹೇಳುತ್ತಿದ್ದಾರೆ. ಅವರು ತಳ್ಳಿದ್ದರಿಂದ ಹಿರಿಯ ಸಂಸದರೊಬ್ಬರ ತಲೆಗೆ ಗಾಯವಾಗಿದೆ. ಇಬ್ಬರು ಸಂಸದರು ಆಸ್ಪತ್ರೆಗೆ ದಾಖಲಾಗಿದ್ದು, ತಳ್ಳಿದ್ದರಿಂದ ಏನೂ ಆಗಿಲ್ಲ ಎಂದು ರಾಹುಲ್ ಗಾಂಧಿ ಹೇಳುತ್ತಿದ್ದಾರೆ. ದುರಹಂಕಾರ, ದಬ್ಬಾಳಿಕೆ ಮತ್ತು ಸರ್ವಾಧಿಕಾರ ಗಾಂಧಿ ಕುಟುಂಬದ ರಕ್ತನಾಳಗಳಲ್ಲಿ ಹರಿದಾಡುತ್ತಿದೆ, ನಾಚಿಕೆಗೇಡಿನ ಸಂಗತಿʼ ಎಂದು ಬರೆದುಕೊಂಡಿದ್ದಾರೆ.
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಕೂಡ ಇದೇ ರೀತಿಯ ಪೋಸ್ಟ್ ಮಾಡಿದ್ದಾರೆ. ಇದನ್ನು ಎಕ್ಸ್ ಮತ್ತು ಫೇಸ್ ಬುಕ್ ನಲ್ಲಿ ಹಲವರು ಹಂಚಿಕೊಂಡಿದ್ದಾರೆ.
ವಾಸ್ತವವೇನು?
ಈ ಕುರಿತು ಸತ್ಯಶೋಧನಾ ಸಂಸ್ಥೆ ಬೂಮ್ (BOOM) ರಾಹುಲ್ ಗಾಂಧಿಯ ಸಂಪೂರ್ಣ ಹೇಳಿಕೆಯ ವೀಡಿಯೊವನ್ನು ಪರಿಶೀಲಿಸಿದೆ. ಈ ವೇಳೆ ಬಾಲಸೋರ್ ಕ್ಷೇತ್ರದ ಸಂಸದ ಸಾರಂಗಿ ಅವರನ್ನು ತಳ್ಳಿಹಾಕಿರುವುದನ್ನು ರಾಹುಲ್ ಗಾಂಧಿ ಒಪ್ಪಿಕೊಂಡಿದ್ದಾರೆ ಎಂದು ತಪ್ಪಾಗಿ ಹೇಳಿಕೊಳ್ಳಲು ವೀಡಿಯೊದ ನಿರ್ದಿಷ್ಠ ತುಣುಕನ್ನು ಎಡಿಟ್ ಮಾಡಿರುವುದು ಕಂಡು ಬಂದಿದೆ.
ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ನನ್ನನ್ನು ಸಂಸತ್ತಿಗೆ ಪ್ರವೇಶಿಸಿದಂತೆ ಬಿಜೆಪಿ ನಾಯಕರು ತಳ್ಳಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸುವುದು ವೀಡಿಯೊವನ್ನು ಸಂಪೂರ್ಣವಾಗಿ ಪರಿಶೀಲಿಸಿದಾಗ ಬಯಲಾಗಿದೆ.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತಳ್ಳಾಟ ನಡೆದಿದೆ. ರಾಹುಲ್ ಸಂಸದರೋರ್ವರನ್ನು ತಳ್ಳಿದ್ದರು ಮತ್ತು ಅವರು ನನ್ನ ಮೇಲೆ ಬಿದ್ದಿದ್ದರು, ನಾನು ಗಾಯಗೊಂಡೆ’ ಎಂದು ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಆರೋಪಿಸಿದ್ದಾರೆ. ಮತ್ತೊಂದೆಡೆ ಸಂಸತ್ತಿಗೆ ಪ್ರವೇಶಿಸದಂತೆ ನಮ್ಮನ್ನು ತಳ್ಳಿದ್ದಾರೆಂದು ಬಿಜೆಪಿ ಸಂಸದರ ವಿರುದ್ಧ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
BOOM ಸಂಸತ್ತಿನಲ್ಲಿ ರಾಹುಲ್ ಗಾಂಧಿ ನೀಡಿರುವ ಹೇಳಿಕೆಯ ಸಂಪೂರ್ಣ ವೀಡಿಯೊ ಮತ್ತು ಅನುರಾಗ್ ಠಾಕೂರ್ ಹಂಚಿಕೊಂಡ ವೀಡಿಯೊವನ್ನು ಪರಿಶೀಲಿಸಿದೆ. ʼರಾಹುಲ್ ಸಂಸದರೋರ್ವರನ್ನು ತಳ್ಳಿದ್ದರು ಮತ್ತು ಅವರು ನನ್ನ ಮೇಲೆ ಬಿದ್ದಿದ್ದರು, ನಾನು ಗಾಯಗೊಂಡೆ’ ಎಂದು ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಹೇಳಿದ್ದಾರೆ. ರಾಹುಲ್ ಗಾಂಧಿ ಒಬ್ಬ ಸಂಸದರನ್ನು ತಳ್ಳಿದಾಗ ನಾನು ಮೆಟ್ಟಿಲುಗಳ ಬಳಿ ನಿಂತಿದ್ದೆ, ಆಗ ಅವರು ನನ್ನ ಮೇಲೆ ಬಿದ್ದರು, ಇದರಿಂದ ನಾನೂ ಬಿದ್ದೆ ಎಂದು ಸಾರಂಗಿ ಮಾಧ್ಯಮಗಳಿಗೆ ಹೇಳಿದ್ದಾರೆ.
ಸಾರಂಗಿ 1999ರಲ್ಲಿ ಬಜರಂಗದಳದ ಒಡಿಶಾ ರಾಜ್ಯ ಘಟಕದ ಮುಖ್ಯಸ್ಥರಾಗಿದ್ದರು. ಅವರು ಆಸ್ಟ್ರೇಲಿಯನ್ ಕ್ರಿಶ್ಚಿಯನ್ ಮಿಷನರಿ ಗ್ರಹಾಂ ಸ್ಟೇನ್ಸ್ ಮತ್ತು ಅವರ ಇಬ್ಬರು ಮಕ್ಕಳನ್ನು ಸುಟ್ಟು ಹಾಕಿದ್ದ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದರು.
ಸಂಸತ್ತಿನಲ್ಲಿ ಮಾಧ್ಯಮಗಳ ಜೊತೆ ರಾಹುಲ್ ಗಾಂಧಿ ಮಾತನಾಡಿದ್ದಾರೆ. ಈ ವೀಡಿಯೊವನ್ನು ಪಿಟಿಐ ಮತ್ತು ಎಎನ್ಐ ಪ್ರಸಾರ ಮಾಡಿದೆ. ವೀಡಿಯೊದಲ್ಲಿ ಸಂಸತ್ತಿಗೆ ತಮ್ಮ ಪ್ರವೇಶವನ್ನು ನಿರ್ಬಂಧಿಸಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ, ಸಂಸತ್ತಿಗೆ ಪ್ರವೇಶಿಸದಂತೆ ತಳ್ಳಿದ್ದಾರೆ ಎಂದು ಹೇಳುವುದು ವೀಡಿಯೊದಲ್ಲಿ ಸೆರೆಯಾಗಿದೆ.
ಪಿಟಿಐ ಮತ್ತು ಎಎನ್ಐ ವರದಿಗಳ ಪ್ರಕಾರ ಮಾಧ್ಯಮಗಳೊಂದಿಗೆ ಗಾಂಧಿಯವರ ಸಂವಾದದ ವಿವರಗಳು ಇಲ್ಲಿದೆ..
ಪತ್ರಕರ್ತ: ನೀವು ತಳ್ಳಿದ್ದೀರಿ ಎಂದು ಬಿಜೆಪಿ ಸಂಸದರು ಆರೋಪಿಸಿದ್ದಾರೆ..
ರಾಹುಲ್ ಗಾಂಧಿ: ಇಲ್ಲ, ಇಲ್ಲ, ಇಲ್ಲ... ನೋಡಿ... ಶಾಂತವಾಗಿ... ಇದು ನಿಮ್ಮ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ನಾನು ಭಾವಿಸುತ್ತೇನೆ... (ಸಂಸತ್ತಿಗೆ ಬೆರಳು ತೋರಿಸಿ) ಇದು ಸಂಸತ್ತಿನ ಪ್ರವೇಶ ದ್ವಾರ. ನಾನು ಈ ದ್ವಾರದ ಮೂಲಕ ಪ್ರವೇಶಿಸಲು ಪ್ರಯತ್ನಿಸುತ್ತಿದ್ದೆ. ಈ ವೇಳೆ ಬಿಜೆಪಿಯ ಕೆಲ ಸಂಸದರು ನನ್ನನ್ನು ತಡೆಯಲು ಯತ್ನಿಸುತ್ತಿದ್ದರು...ಅವರು ತಳ್ಳಿ, ಬೆದರಿಸಿದ್ದಾರೆ ಎಂದು ಹೇಳಿದ್ದಾರೆ.
ಪತ್ರಕರ್ತ: ಖರ್ಗೆ ಜಿ (ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ) ಮತ್ತು ಪ್ರಿಯಾಂಕಾ ಅವರನ್ನೂ ತಳ್ಳಲಾಗಿದೆ…
ರಾಹುಲ್ ಗಾಂಧಿ: ಇಲ್ಲ, ಇಲ್ಲ... ನೋಡಿ... ಹೌದು, ಮಾಡಿದ್ದಾರೆ, ಮಾಡಿದ್ದಾರೆ. ಆದರೆ... ಸರಿ...ಅವರು ನಮ್ಮನ್ನು ತಳ್ಳಿರುವುದರಿಂದ ನಮಗೆ ನೋವಿಲ್ಲ. ಆದರೆ ಇದು ಸಂಸತ್ತಿನ ಪ್ರವೇಶ ದ್ವಾರವಾಗಿದೆ ಮತ್ತು ಪ್ರವೇಶಿಸಲು ನಮಗೆ ಹಕ್ಕಿದೆ. ನಾವು ಒಳಗೆ ಹೋಗುತ್ತಿದ್ದಾಗ ಬಿಜೆಪಿ ಸದಸ್ಯರು ನಮ್ಮನ್ನು ತಡೆದರು.
ಪತ್ರಕರ್ತ: ರಾಹುಲ್ ಜೀ, ಇದು ದೊಡ್ಡ ವಿಷಯವೇ, ಅದರ ಆಧಾರದ ಮೇಲೆ ನೀವು ರಾಜೀನಾಮೆಗೆ ಒತ್ತಾಯಿಸುತ್ತಿದ್ದೀರಾ?
ರಾಹುಲ್ ಗಾಂಧಿ: ಕೇಂದ್ರ ಸರಕಾರದ ಸಮಸ್ಯೆ ಎಂದರೆ ಅವರು ಸಂವಿಧಾನದ ಮೇಲೆ ದಾಳಿ ಮಾಡುತ್ತಿದ್ದಾರೆ ಮತ್ತು ಅಂಬೇಡ್ಕರ್ ಅವರಿಗೆ ಅವಮಾನಿಸುತ್ತಿದ್ದಾರೆ.
ಸಂಸತ್ತಿನ ಆವರಣದಲ್ಲಿ ಯಾರು ಯಾರನ್ನು ತಳ್ಳಿದರು ಎಂಬುದನ್ನು BOOM ಸ್ವತಂತ್ರವಾಗಿ ಖಚಿತಪಡಿಸಿಕೊಂಡಿಲ್ಲ ಎಂದು ಹೇಳಿಕೊಂಡಿದೆ. ಆದರೆ, ಹಂಚಿಕೊಳ್ಳಲಾಗುತ್ತಿರುವ ವೀಡಿಯೋ ಗಾಂಧಿ ತಳ್ಳಾಟ ನಡೆಸಿದ್ದನ್ನು ಒಪ್ಪಿಕೊಂಡಿದ್ದಾರೆ ಎನ್ನವುದಕ್ಕೆ ಸಾಕ್ಷಿಯಲ್ಲ. ಬದಲಾಗಿ ಪ್ರಿಯಾಂಕ ಮತ್ತು ಖರ್ಗೆ ಅವರನ್ನು ಬಿಜೆಪಿ ಸಂಸದರು ತಳ್ಳಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಲೇಖನವನ್ನು ಮೊದಲು boomlive.in ಪ್ರಕಟಿಸಿದೆ. ʼಶಕ್ತಿ ಕಲೆಕ್ಟಿವ್ʼನ ಭಾಗವಾಗಿ ವಾರ್ತಾ ಭಾರತಿ ಅನುವಾದಿಸಿದೆ.