ಹಿರಿಯ ನಾಗರಿಕರಿಗೆ ನೀಡಿದ ರಿಯಾಯಿತಿ ಹಿಂಪಡೆದ ಬಳಿಕ 8,913 ಕೋಟಿ ರೂ. ಹೆಚ್ಚುವರಿ ಆದಾಯ ಗಳಿಸಿದ ರೈಲ್ವೆ ಇಲಾಖೆ!

Photo | PTI
ಹೊಸದಿಲ್ಲಿ : ಹಿರಿಯ ನಾಗರಿಕರಿಗೆ ನೀಡಿದ ರಿಯಾಯಿತಿಗಳನ್ನು ಹಿಂತೆಗೆದುಕೊಳ್ಳುವ ಮೂಲಕ ಭಾರತೀಯ ರೈಲ್ವೆ ಐದು ವರ್ಷಗಳಲ್ಲಿ ಸುಮಾರು 8,913 ಕೋಟಿ ರೂಪಾಯಿಗಳ ಹೆಚ್ಚುವರಿ ಆದಾಯವನ್ನು ಗಳಿಸಿದೆ ಎಂದು ಆರ್‌ಟಿಐ ಮಾಹಿತಿಯಲ್ಲಿ ಬಹಿರಂಗವಾಗಿದೆ.
ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಕೇಳಿದ ಪ್ರಶ್ನೆಗೆ ʼಸೆಂಟರ್ ಫಾರ್ ರೈಲ್ವೆ ಇನ್ಫರ್ಮೇಷನ್ ಸಿಸ್ಟಮ್ಸ್ʼ (CRIS) ಈ ಉತ್ತರವನ್ನು ನೀಡಿದೆ.
ಈ ಹಿಂದೆ 60 ವರ್ಷ ಮೇಲ್ಪಟ್ಟ ಪುರುಷರು ಮತ್ತು ಟ್ರಾನ್ಸ್‌ಜಂಡರ್‌ಗಳಿಗೆ ರೈಲ್ವೆ ಟಿಕೆಟ್‌ನಲ್ಲಿ ಶೇ.40ರಷ್ಟು ರಿಯಾಯಿತಿ ಮತ್ತು 58 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಶೇ.50ರಷ್ಟು ರಿಯಾಯಿತಿ ನೀಡಲಾಗುತ್ತಿತ್ತು. ಆದರೆ, ಈ ವಿನಾಯಿತಿಯು 2020ರ ಮಾರ್ಚ್ 20ರ ಮೊದಲು ಲಭ್ಯವಿತ್ತು. ಕೋವಿಡ್ ಬಳಿಕ ರೈಲ್ವೆ ಸಚಿವಾಲಯ ಈ ವಿನಾಯಿತಿಯನ್ನು ರದ್ದುಗೊಳಿಸಿತ್ತು.
ಆರ್‌ಟಿಐ ಕಾಯಿದೆಯಡಿ ಪಡೆದ ಮಾಹಿತಿಯ ಪ್ರಕಾರ, ರಿಯಾಯಿತಿಯನ್ನು ರದ್ದುಪಡಿಸಿದ ಬಳಿಕ ಅಂದರೆ 2020ರ ಮಾರ್ಚ್ 20ರಿಂದ 2025ರ ಫೆಬ್ರವರಿ 28ರವೆರೆಗೆ 31.35 ಕೋಟಿ ಹಿರಿಯ ನಾಗರಿಕರು(ಪುರುಷ, ಮಹಿಳೆ, ತೃತೀಯಲಿಂಗಿಗಳು) 8,913 ಕೋಟಿ ರೂ. ಹೆಚ್ಚುವರಿ ಮೊತ್ತವನ್ನು ಪಾವತಿಸಿದ್ದಾರೆ ಎಂದು ಹೇಳಿದೆ.
ಹಿರಿಯ ನಾಗರಿಕರಿಗೆ ರೈಲ್ವೆ ಟಿಕೆಟ್‌ಗಳ ಮೇಲಿನ ರಿಯಾಯಿತಿಗಳನ್ನು ಮರುಸ್ಥಾಪಿಸುವಂತೆ ಈ ಹಿಂದೆ ಹಲವಾರು ಬಾರಿ ಸಂಸತ್ತಿನಲ್ಲಿ ಕೂಡ ಆಗ್ರಹಿಸಲಾಗಿದೆ. ಆದರೆ, ರೈಲ್ವೆ ಸಚಿವಾಲಯ ಈ ಬೇಡಿಕೆಯನ್ನು ವಿರೋಧಿಸಿತ್ತು. ́ಭಾರತೀಯ ರೈಲ್ವೆ ಇಲಾಖೆಯು ಸಮಾಜದ ಎಲ್ಲಾ ಸ್ತರಗಳಿಗೆ ಕೈಗೆಟುಕುವ ಸೇವೆಗಳನ್ನು ಒದಗಿಸಲು ಶ್ರಮಿಸುತ್ತಿದೆ ಮತ್ತು 2022-23ರಲ್ಲಿ ಪ್ರಯಾಣಿಕರ ಟಿಕೆಟ್‌ಗಳ ಮೇಲೆ 56,993 ಕೋಟಿ ರೂಪಾಯಿಗಳ ಸಬ್ಸಿಡಿಯನ್ನು ನೀಡಿದೆ. ಇದು ರೈಲಿನಲ್ಲಿ ಪ್ರಯಾಣಿಸುವ ಪ್ರತಿಯೋರ್ವ ವ್ಯಕ್ತಿಗೆ 46% ರಿಯಾಯಿತಿಯನ್ನು ನೀಡುತ್ತದೆ ́ ಎಂದು ವೈಷ್ಣವ್ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಹೇಳಿದ್ದರು.