ಸಚಿವ ಸ್ಥಾನ ತೊರೆಯಿರಿ ಇಲ್ಲವೇ ಜೈಲಿಗೆ ವಾಪಸ್ಸಾಗಿ: ಸೆಂಥಿಲ್ ಬಾಲಾಜಿಗೆ ಸುಪ್ರೀಂ ಸೂಚನೆ

PC: PTI
ಹೊಸದಿಲ್ಲಿ: ಉದ್ಯೋಗಕ್ಕಾಗಿ ಹಣ ಪಡೆದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದ ಬೆನ್ನಲ್ಲೇ ತಮಿಳುನಾಡು ಸಚಿವ ಸಂಪುಟಕ್ಕೆ ಮರು ಸೇರ್ಪಡೆಗೊಂಡ ಹಿರಿಯ ಡಿಎಂಕೆ ಮುಖಂಡ ವಿ.ಸೆಂಥಿಲ್ ಬಾಲಾಜಿ ಅವರಿಗೆ ಬುಧವಾರ ಸುಪ್ರೀಂಕೋರ್ಟ್ ಎರಡು ಆಯ್ಕೆಗಳನ್ನು ನೀಡಿದೆ. ತಕ್ಷಣ ಸಚಿವ ಸ್ಥಾನ ತೊರೆದು ಸ್ವಾತಂತ್ರ್ಯ ಅನುಭವಿಸಬೇಕು ಅಥವಾ ಮತ್ತೆ ಸಚಿವರಾಗಿ ಜೈಲು ಸೇರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಸಚಿವರಾಗಿ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಸಚಿವರಾಗಿ ಮುಂದುವರಿದರೆ ಜಾಮೀನು ಆದೇಶವನ್ನು ಹಿಂಪಡೆಯುವುದಾಗಿ ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂಬ ಕಾರಣಕ್ಕಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಬಾಲಾಜಿ ನ್ಯಾಯಾಲಯದಲ್ಲಿ ಹೇಳಿಕೊಂಡ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಎ.ಜಿ.ಮಶ್ಹಿ ಅವರನ್ನೊಳಗೊಂಡ ನ್ಯಾಯಪೀಠ ಜಾಮೀನು ಮಂಜೂರು ಮಾಡಿತ್ತು.
ಸೆಂಥಿಲ್ ಬಾಲಾಜಿ ಬಿಡುಗಡೆಯಾದ ಎರಡೇ ದಿನಗಳಲ್ಲಿ ಮತ್ತೆ ಸಂಪುಟಕ್ಕೆ ಸೇರಿಕೊಂಡಿರುವುದು ನ್ಯಾಯಾಲಯಕ್ಕೆ ಅವಿಧೇಯತೆ ತೋರಿದ ಕ್ರಮ ಹಾಗೂ ಇಂತಹ ನಡತೆಯನ್ನು ಸಹಿಸಲಾಗದು ಎಂದು ಸರ್ವೋಚ್ಛ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಬಾಲಾಜಿ ಮತ್ತೆ ಅದೇ ಹುದ್ದೆಗೆ ಮರಳಿದ್ದಾರೆ ಹಾಗೂ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಅವರು ಸಚಿವರಾಗಿ ಮುಂದುವರಿದಲ್ಲಿ ಜಾಮೀನು ಆದೇಶವನ್ನು ಹಿಂಪಡೆಯಲಾಗುತ್ತದೆ ಹಾಗೂ ಜಾಮೀನು ನೀಡಿದ ಕ್ರಮ ನಮ್ಮ ಪ್ರಮಾದ ಎಂದು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಸಚಿವರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ಮುಕುಲ್ ರೋಹಟ್ಗಿ ಅವರಿಗೆ ಈ ಸಂಬಂಧ ಸೂಚನೆ ನೀಡಿದ ನ್ಯಾಯಪೀಠ, ಸಚಿವಸ್ಥಾನ ಮತ್ತು ಸ್ವಾತಂತ್ರ್ಯದ ನಡುವೆ ಬಾಲಾಜಿ ಆಯ್ಕೆ ಮಾಡಿಕೊಳ್ಳಬೇಕು. ಅವರು ಯಾವ ಆಯ್ಕೆ ಮಾಡುತ್ತಾರೆ ಎನ್ನುವುದಕ್ಕೆ ಸಿದ್ಧರಾಗಲಿ ಎಂದು ಹೇಳಿದೆ.