ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಜಮ್ಮುಕಾಶ್ಮೀರದಲ್ಲಿ 48 ರೆಸಾರ್ಟ್‌ಗಳು, ಅರ್ಧದಷ್ಟು ಪ್ರವಾಸಿ ತಾಣಗಳು ಬಂದ್

Photo | NDTV
ಶ್ರೀನಗರ: ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಜಮ್ಮುಕಾಶ್ಮೀರ ಸರಕಾರ ಈ ಪ್ರದೇಶದ 48 ರೆಸಾರ್ಟ್‌ಗಳು ಮತ್ತು ಅರ್ಧದಷ್ಟು ಪ್ರವಾಸಿ ತಾಣಗಳನ್ನು ಬಂದ್ ಮಾಡಿದೆ.
ಪ್ರಶಾಂತ ಕಣಿವೆಗಳು ಮತ್ತು ಸುಂದರವಾದ ಪರ್ವತಗಳಿಗೆ ಹೆಸರುವಾಸಿಯಾದ ಜಮ್ಮುಕಾಶ್ಮೀರದಲ್ಲಿ ಕನಿಷ್ಠ 48 ರೆಸಾರ್ಟ್‌ಗಳನ್ನು ಬಂದ್ ಮಾಡಲಾಗಿದೆ. ಬುದ್ಗಾಮ್‌ನ ದೂಧಪತ್ರಿ ಮತ್ತು ಅನಂತನಾಗ್‌ನ ವೆರಿನಾಗ್ ಸೇರಿದಂತೆ ಹಲವಾರು ಪ್ರವಾಸಿ ತಾಣಗಳಿಗೆ ತೆರಳದಂತೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.
ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರ ಹತ್ಯೆ ಹಿನ್ನೆಲೆ ಜಮ್ಮು ಕಾಶ್ಮೀರಕ್ಕೆ ತೆರಳಿದ್ದ ಪ್ರವಾಸಿಗರು ವಾಪಾಸ್ಸಾಗುತ್ತಿದ್ದಾರೆ. ಅನೇಕ ಜನರು ತಮ್ಮ ನಿಗದಿಗೊಳಿಸಿದ ಪ್ರವಾಸವನ್ನು ಮೊಟಕುಗೊಳಿಸಿದ್ದಾರೆ.
ಒಂದು ವಾರದ ಹಿಂದೆ ಪಹಲ್ಗಾಮ್ ಪಟ್ಟಣವು ಪ್ರವಾಸಿಗರಿಂದ ತುಂಬಿ ಕೊಂಡಿತ್ತು. ಆದರೆ ಈಗ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿದಿದೆ.
ಪ್ರವಾಸೋದ್ಯಮ ಸ್ಥಳೀಯರ ಪ್ರಮುಖ ಆದಾಯದ ಮೂಲವಾಗಿತ್ತು. ಪ್ರವಾಸಿಗರ ಕುಸಿತವು ತಮ್ಮ ಆದಾಯದ ಮೂಲ ಮತ್ತು ಜೀವನೋಪಾಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂದು ಸ್ಥಳೀಯರು ಭಯಪಡುತ್ತಾರೆ. ಭಯೋತ್ಪಾದಕ ದಾಳಿಯನ್ನು ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.