ಪುತ್ತೂರಿನಲ್ಲಿ ಮಂತ್ರಾಕ್ಷತೆ ವಿಚಾರದಲ್ಲಿ ಬಡಿದಾಡಿಕೊಂಡಿದ್ದ ಸಂಘ ಪರಿವಾರ – ಪುತ್ತಿಲ ಪರಿವಾರ: ಹಿಂದೂಗಳ ಮೇಲೆ ಹಲ್ಲೆ ಎಂದು ಸುಳ್ಳು ಟ್ವೀಟ್ ಮಾಡಿದ ಪತ್ರಕರ್ತ ರಾಹುಲ್ ಶಿವಶಂಕರ್

Update: 2024-01-21 06:33 GMT

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಇತ್ತೀಚೆಗೆ ಸಂಘ ಪರಿವಾರದ ಸದಸ್ಯರ ನಡುವೆ ಹಲ್ಲೆ ಪ್ರಕರಣದ ಬಗ್ಗೆ ಪತ್ರಕರ್ತ ರಾಹುಲ್ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿ ಸುಳ್ಳು ಟ್ವೀಟ್ ಮಾಡಿದ್ದಾರೆ. ಅವರ ಟ್ವೀಟ್ ಪ್ರಕಾರ, ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೂ ಮುನ್ನ ಮಂತ್ರಾಕ್ಷತೆಯನ್ನು ಹಂಚುತ್ತಿದ್ದ ಸಂತೋಷ್ ಎಂಬ ಹಿಂದೂ ಕಾರ್ಯಕರ್ತನೊಬ್ಬನನ್ನು ಥಳಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಘಟನೆಯನ್ನು ತಮ್ಮ ಟ್ವೀಟ್‌ನಲ್ಲಿ ಖಂಡಿಸಿರುವ ರಾಹುಲ್ ಶಿವಕುಮಾರ್, "ಹಿಂದೂ ಭೀತಿ ಏನಾದರೂ ಸ್ಥಳಾವಕಾಶ ಪಡೆದುಕೊಳ್ಳುತ್ತಿದೆಯೇ? ಯಾಕೆಂದರೆ, ತುಷ್ಟೀಕರಣ ರಾಜಕಾರಣದ ಹಿನ್ನೆಲೆಯಲ್ಲಿ ಅದನ್ನು ಹತ್ತಿಕ್ಕುವ ಬಯಕೆಯೇನಾದರೂ ಮೃದುವಾಗಿದೆಯೇ?" ಎಂದು ಪ್ರಶ್ನಿಸಿದ್ದಾರೆ.

ವಾಸ್ತವವಾಗಿ, ಭೂವ್ಯಾಜ್ಯದ ಕಾರಣಕ್ಕೆ ನೆರೆಹೊರೆಯವರ ನಡುವೆ ಗಲಾಟೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ರಿಶ್ಯಂತ್ ಹೇಳಿಕೆ ನೀಡಿದ್ದಾರೆ. ಈ ಕುರಿತು ದೂರು ಮತ್ತು ಪ್ರತಿ ದೂರು ಕೂಡಾ ದಾಖಲಾಗಿದೆ. ಯಾವುದೇ ಸುಳ್ಳು ಅಥವಾ ದಾರಿ ತಪ್ಪಿಸುವ ಸಂದೇಶಗಳಿಗೆ ಸಾರ್ವಜನಿಕರು ಬಲಿಯಾಗಬಾರದು ಎಂದು ಪೊಲೀಸ್ ವರಿಷ್ಠಾಧಿಕಾರಿ ರಿಶ್ಯಂತ್ ಮನವಿ ಕೂಡ ಮಾಡಿದ್ದರು.

ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ ಐಆರ್ ಪ್ರಕಾರ, ಸಂತೋಷ್ ಎಂಬ ದೂರುದಾರ, ಮಂತ್ರಾಕ್ಷತೆ ಹಂಚಿಕೆ ಕುರಿತ ಸಭೆ ಮುಗಿಸಿಕೊಂಡು, ಉದ್ಯಾನವನದ ಬಳಿ ತನ್ನ ಸ್ಕೂಟರ್ ನಿಲ್ಲಿಸಿ ಮನೆಗೆ ತೆರಳುವಾಗ ಆರೋಪಿಗಳು ನನ್ನನ್ನು ಮಾರ್ಗಮಧ್ಯ ಅಡ್ಡಗಟ್ಟಿ ನನ್ನ ಮೇಲೆ ಹಲ್ಲೆ ನಡೆಸಿದರು. ಗಲಾಟೆ ಕೇಳಿ ಮನೆಯಿಂದ ಹೊರಗೆ ಬಂದ ನನ್ನ ತಾಯಿ ಸವಿತಾ ಮೇಲೂ ಹಲ್ಲೆ ನಡೆಸಲಾಯಿತು. ನನಗೆ ಮಂತ್ರಾಕ್ಷತೆ ಹಂಚಿಕೆ ಮಾಡುವ ಅವಕಾಶ ದೊರೆತಿದ್ದರಿಂದ ಆರೋಪಿಗಳಿಗೆ ಅಸೂಯೆ ಉಂಟಾಗಿತ್ತು. ಹೀಗಾಗಿ ಅವರು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಪ್ರತಿ ದೂರು ದಾಖಲಿಸಿರುವ ಕೇಶವ ನಾಯಕ್ ಎಂಬ ವ್ಯಕ್ತಿ, ನನ್ನ ಉದ್ಯಾನವನದ ಸುತ್ತ ಹಾಕಿದ್ದ ಮುಳ್ಳಿನ ಬೇಲಿಯನ್ನು ಆರೋಪಿ ಸಂತೋಷ್, ಆತನ ಪತ್ನಿ ಹಾಗೂ ಮತ್ತೊಬ್ಬ ಸಂದೀಪ್ ಎಂಬ ವ್ಯಕ್ತಿ ಕಿತ್ತು ಹಾಕಲು ಪ್ರಯತ್ನಿಸುತ್ತಿದ್ದರು. ಈ ಕುರಿತು ನಾನು ಪ್ರಶ್ನಿಸಿದಾಗ ಆರೋಪಿಗಳು ನನ್ನನ್ನು ನಿಂದಿಸಿ, ನನ್ನನ್ನು ಹತ್ಯೆಗೈಯ್ಯುವುದಾಗಿ ಬೆದರಿಕೆ ಒಡ್ಡಿದರು. ನನ್ನ ತಂದೆ ಕೊರಗಪ್ಪ ನಾಯಕ್ ಹಾಗೂ ತಾಯಿ ಸವಿತಾರನ್ನು ಆರೋಪಿಗಳು ನಿಂದಿಸಿದರು ಎಂದು ಆರೋಪಿಸಿದ್ದಾರೆ.

ಈ ಸಂಬಂಧ ಜನವರಿ 17ರಂದು ಪುತ್ತೂರಿನಲ್ಲಿ ಪತ್ರಿಕಾ ಗೋಷ್ಠಿ ನಡೆಸಿರುವ ಸಂತೋಷ್, ನಮ್ಮ ಕುಟುಂಬಗಳ ನಡುವೆ ಹಲವಾರು ವರ್ಷಗಳಿಂದ ವ್ಯಾಜ್ಯವಿದೆ ಎಂದು ಸ್ವಯಂ ಹೇಳಿಕೆ ನೀಡಿದ್ದಾರೆ‌. ಹೀಗಾಗಿ ಈ ಘಟನೆಯು ಭೂವ್ಯಾಜ್ಯದ ಕಾರಣಕ್ಕಾಗಿ ನಡೆದಿದೆಯೆ ಹೊರತು, ಪತ್ರಕರ್ತ ರಾಹುಲ್ ಶಿವಶಂಕರ್ ಆರೋಪಿಸಿರುವಂತೆ ಹಿಂದೂ ಭೀತಿಯಿಂದ ನಡೆದಿರುವುದಲ್ಲ ಎಂದು ಸ್ಪಷ್ಟವಾಗಿದೆ.

ಈ ಬಗ್ಗೆ ಸತ್ಯಶೋಧನಾ ವರದಿ ಮಾಡಿದ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮುಹಮ್ಮದ್ ಝುಬೈರ್ ಮರು ಟ್ವೀಟ್ ಮಾಡಿ, “ನಮಸ್ಕಾರ @ಆರ್‌ಶಿವಶಂಕರ್, ' ಹಿಂದೂ ಭೀತಿ' ಎಂದರೆ ನಿಮ್ಮ ಅರ್ಥವೇನು? ಭಯ ಹುಟ್ಟಿಸುವುದನ್ನು ನಿಲ್ಲಿಸಿ.

ಜಗಳದಲ್ಲಿ ಮಾಡಿಕೊಂಡ ಇತ್ತಂಡಗಳೂ ಹಿಂದುತ್ವ ಸಂಘಟನೆಗಳಿಗೆ ಸೇರಿದವು. ʼಹಿಂದೂ ಭೀತಿʼ ಪರಿಣಾಮವಾಗಿ ಅಕ್ಷತೆ ವಿತರಣೆಯನ್ನು ತಡೆಯಲು ಅವರ್ಯಾರು ಬಯಸಿರಲಿಲ್ಲ. ವಾಸ್ತವದಲ್ಲಿ, ಘಟನೆಯಲ್ಲಿ ಭಾಗಿಯಾಗಿರುವ ಎರಡು ಕುಟುಂಬಗಳು ಸಿವಿಲ್ ವಿವಾದಕ್ಕಾಗಿ ವರ್ಷಗಳಿಂದ ಭಿನ್ನಾಭಿಪ್ರಾಯ ಹೊಂದಿದ್ದು, ಪತ್ರಿಕಾಗೋಷ್ಠಿಯಲ್ಲಿ ಸಂತೋಷ್ ಅವರ ಹೇಳಿಕೆಯ ಪ್ರಕಾರ, ಅಕ್ಷತೆಯನ್ನು ಯಾರು ಹಂಚುತ್ತಾರೆ ಎಂಬ ಬಗ್ಗೆ ವಾಗ್ವಾದ ನಡೆದಿತ್ತು. ಅಲ್ಲದೆ, ನೆರೆಹೊರೆಯವರ ನಡುವಿನ ಜಗಳವಷ್ಟೇ ಅದು ಎಂದು ಎಸ್ಪಿ ರಿಶ್ಯಂತ್ ಹೇಳಿದ್ದಾರೆ. ಈ ಸಂಬಂಧ ದೂರು ಮತ್ತು ಪ್ರತಿದೂರು ದಾಖಲಾಗಿದೆ. ಸಾರ್ವಜನಿಕರು ಸುಳ್ಳು ಸುದ್ದಿಗಳಿಗೆ ಅಥವಾ ದಾರಿತಪ್ಪಿಸುವ ಸಂದೇಶಗಳಿಗೆ ಮರುಳಾಗಬೇಡಿ ಎಂದು ಎಸ್ಪಿ ಮನವಿ ಮಾಡಿದ್ದಾರೆ” ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News